ಬೆಂಗಳೂರು: ನನ್ನ ಸಿನಿಮಾದ ಕಥೆಗಳಿಗೆ ನನ್ನ ಊರು ಮತ್ತು ಯಕ್ಷಗಾನವೇ ಪ್ರೇರಣೆ ಎಂದು ಖ್ಯಾತ ಸಿನಿಮಾ ನಟ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ಕುಂದಾಪ್ರ ಕನ್ನಡ ಪ್ರತಿಷ್ಠಾನ’ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಕುಂದಾಪುರ ಕನ್ನಡ ಹಬ್ಬ–2024’ರ ಮೊದಲ ದಿನದ ಸಂಭ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಎಲ್ಲಿಗೆ ಹೋದರೂ, ಏನೇ ಮಾಡಿದರೂ, ಎಲ್ಲಿಂದ ಬಂದಿದ್ದೇವೆ ಎನ್ನುವುದು ಮುಖ್ಯ. ಆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ಸಿನಿಮಾದ ಎಲ್ಲ ಕಥೆಗಳಿಗೂ ಕುಂದಾಪುರದ ನನ್ನೂರು ಕೆರಾಡಿಯೇ ಕಾರಣ, ನಾನು ಬೆಳೆದ ಪರಿಸರವೇ ಪ್ರೇರಣೆ. ಅದರಲ್ಲೂ ಓದದೆಯೇ ರಾಮಾಯಣ–ಮಹಾಭಾರತದ ಸಾರ ತಿಳಿಯಲು ಯಕ್ಷಗಾನ ಕಾರಣ. ‘ಕಾಂತಾರ’ ಸಿನಿಮಾ ಚಿತ್ರೀಕರಣ ಕೂಡ ಕುಂದಾಪುರ ಪರಿಸರದಲ್ಲೇ ಆಗಿರುವುದು ಎಂದು ತಿಳಿಸಿದರು.
ನಮ್ಮ ಭಾಷೆ ಸಂಸ್ಕೃತಿ ಮಕ್ಕಳಿಗೆ ಗೊತ್ತಾಗಬೇಕು. ಅದಕ್ಕಾಗಿ ಇಂಥ ಹಬ್ಬಗಳು ಅತ್ಯಗತ್ಯ. ತುಳಸಿ ಕಟ್ಟೆಗಳು ಅಪರೂಪ ಆಗಿರುವ ಈ ಕಾಲದಲ್ಲಿ ಇಲ್ಲಿ ತುಳಸಿ ಕಟ್ಟೆ ಇಟ್ಟು ಉದ್ಘಾಟನೆ ನಡೆಸಿರುವುದು ಉತ್ತಮ ಸಂಗತಿ. ನಾನು ಕೂಡ ನನ್ನ ಪ್ರತಿ ಸಿನಿಮಾದಲ್ಲೂ ಅಕ್ಕಿಮುಡಿ, ನೆಟ್ಟಿ ಮುಂತಾದವನ್ನು ತೋರಿಸುತ್ತಿರುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q