ಗಂಜಿ ಗಿರಾಕಿ ರೋಹಿತ್ ಚಕ್ರತೀರ್ಥ ಆರ್‌ಎಸ್‌ಎಸ್ ಗಂಜಿ ಕೇಂದ್ರದಿಂದ ಬಂದವರು. ಸತ್ಯವಲ್ಲದ ವಿಷಯಗಳನ್ನು ಪಠ್ಯದಲ್ಲಿ ಸೇರಿಸಿ ನಾಡಿನ ಚೇತನಗಳಿಗೆ ಅವಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರಾದ ನಾಗೇಶ್ ಅವರು ಹೆಸರಿಗೆ ಅಷ್ಟೇ ಮಂತ್ರಿಯಾಗಿದ್ದಾರೆ. ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇವರೆಲ್ಲ ಗೊಂಬೆಗಳಿದ್ದಂತೆ. ಆರ್‍ಎಸ್‍ಎಸ್ ಕೀ ಕೊಟ್ಟಂತೆ ಗೊಂಬೆಗಳು ತಿರುಗುತ್ತದೆ ಎಂದು ವ್ಯಂಗ್ಯವಾಡಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್, ನಾರಾಯಣಗುರು ಅವರ ಪಠ್ಯಗಳನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರ ಪಾಠವನ್ನು ತಿರುಚಲಾಗಿದೆ. ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.
ಚನ್ನಣ್ಣ ವಾಲಿಕಾರ್ ಅವರು ಬರೆದ 6ನೇ ತರಗತಿಯಲ್ಲಿದ್ದ ಅಂಬೇಡ್ಕರ್ ಪಾಠವನ್ನು ಕೈಬಿಟ್ಟಿದ್ದಾರೆ. 9ನೇ ತರಗತಿಯ ಸಂವಿಧಾನದ ಪಾಠ ತಿರುಚಿ ಅಲ್ಲದೆ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದು ಹಾಕಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ, ಗೊಂದಲ ಮೂಡಿಸಿದ್ದು, ಪರಿಷ್ಕರಣೆ ನೆಪದಲ್ಲಿ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದು ಆರ್‍ಎಸ್‍ಎಸ್ ಹಿಡನ್ ಅಜೆಂಡಾ. ಪರಿಷ್ಕರಣೆ ನೆಪದಲ್ಲಿ ಹಿಡನ್ ಅಜೆಂಡಾ ಜಾರಿಗೆ ತಂದಿದ್ದಾರೆ.
ಪರಿಷ್ಕರಣಾ ಸಮಿತಿಯಲ್ಲಿ ತಜ್ಞರು ಇರುತ್ತಿದ್ದರು. ಆದರೆ ರೋಹಿತ್ ಚಕ್ರತೀರ್ಥ ಅವರಿಗೆ ಅಗತ್ಯ ವಿದ್ಯಾರ್ಹತೆಯೇ ಇಲ್ಲ. ಅವರು ಆರ್‍ಎಸ್‍ಎಸ್‍ನಿಂದ ಬಂದವರು ಎಂದು ಹೇಳಿದರು. 10ನೇ ತರಗತಿಯ ಅಂಬೇಡ್ಕರ್ ಪಾಠ ತಿರುಚಲಾಗಿದೆ. ಬುದ್ದ, ಬಸವ, ಅಂಬೇಡ್ಕರ್ ಎಲ್ಲ ಪಾಠಗಳನ್ನು ಸರ್ಕಾರ ಕೈಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವಣ್ಣನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತಹ ಕೆಲಸ ಮಾಡಿರುವುದಲ್ಲದೆ, ಕುವೆಂಪು ಅವರನ್ನು ಅವಮಾನ ಮಾಡಿದ್ದಾರೆ. ಬ್ರಹ್ಮ ಸಮಾಜ, ಆರ್ಯ ಸಮಾಜ, ಪೆರಿಯಾರ್, ಸಾವಿತ್ರಿಬಾಯಿ ಫುಲೆ ಪಠ್ಯಗಳನ್ನು ತೆಗೆದು ಹಾಕಿದ್ದಾರೆ ಎಂದು ಹೇಳಿದರು. ರೋಹಿತ್ ಚಕ್ರತೀರ್ಥ ವಿಕೃತ ಮನುಷ್ಯ. ನಾಡಧ್ವಜಕ್ಕೂ ಅವಮಾನ ಮಾಡಿದ್ದಲ್ಲದೆ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇಂಥವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ತಪ್ಪು. ಇವರನ್ನು ಕೂಡಲೇ ಬಂಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಪಠ್ಯ ಪರಿಷ್ಕರಣೆ ಬಗ್ಗೆ ಎಲ್ಲರೂ ವಿರೋಧ ವ್ಯಕ್ತಪಡಿಸಿದರು. ಸರ್ಕಾರ ಕ್ರಮ ಜರುಗಿಸಿಲ್ಲ.ಅಕಾರದ ಮುಂದೆ ಎಲ್ಲವೂ ಗೌಣವಾಗಿದೆ. ಬಸವಣ್ಣನವರಿಗೆ ಅನ್ಯಾಯವಾಗಿದ್ದರೂ ಬೊಮ್ಮಾಯಿ ಅವರು ಚಕಾರ ಎತ್ತಿಲ್ಲ. ಕುವೆಂಪು ಅವರಿಗೆ ಅಪಮಾನ ಮಾಡಿದರೂ ಒಕ್ಕಲಿಗ ಸಮುದಾಯದ ಸಚಿವರಾದ ಆರ್. ಅಶೋಕ್, ಅಶ್ವಥ್ ನಾರಾಯಣ್, ಸೋಮಶೇಖರ್ ಮೌನವಹಿಸಿದ್ದಾರೆ.
ಅಂಬೇಡ್ಕರ್ ಬಗ್ಗೆ ತಿರುಚಿ ಬರೆದರೂ ಸಚಿವರಾದ ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಅವರುಗಳಾಗಲಿ ಏನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ. ಅಂಬೇಡ್ಕರ್ ಹೆಸರೇಳಿ ಶಾಸಕರಾದ ಮಹೇಶ್ ಕೂಡ ಸಾರ್ವಕರ್ ಗುಣಗಾನ ಮಾಡುತ್ತಿದ್ದಾರೆ ಎಂದು ದಲಿತ ಒಕ್ಕಲಿಗ ಲಿಂಗಾಯಿತ ಸಚಿವರ ಬಗ್ಗೆ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಗಣ್ಯರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಸ್ತಬ್ಯಚಿತ್ರ ತೆಗೆಯಲಾಗಿತ್ತು. ಈಗ ಅವರ ಪಾಠವನ್ನು ತೆಗೆದು ಹಾಕಿದರು. ಅವರದೇ ಸಮುದಾಯದ ಮುಖಂಡರಾದ ಸುನೀಲ್‍ಕುಮಾರ್ ಚಕಾರವೆತ್ತಿಲ್ಲ. ಇಷ್ಟೆಲ್ಲ ಅನ್ಯಾಯವಾದರೂ ಅಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ ಎಂದು ಹೇಳಿದರು.
ಕೆಂಪೇಗೌಡರನ್ನು ಕಡೆಗಣಿಸಿ ಜಮ್ಮುಕಾಶ್ಮೀರದ ರಾಜನನ್ನು ತಂದಿದ್ದಾರೆ. ಕೆಂಪೇಗೌಡರಿಗೆ ಅನ್ಯಾಯವಾಗಿದ್ದರೂ ಮಂತ್ರಿಗಳು ಮಾತನಾಡುತ್ತಿಲ್ಲ.
ಸ್ವಾತಂತ್ರ್ಯ ಚಳವಳಿಯಲ್ಲಿ ಇವರ್ಯಾರು ಭಾಗವಹಿಸಿ ರಲಿಲ್ಲ. ಹೆಗ್ಡೇವಾರ್ ಬ್ರಿಟಿಷರ ಸೈನ್ಯಕ್ಕೆ ಸೇರಿಸಿ ಅವರ ಸೈನ್ಯವನ್ನು ಬಲಗೊಳಿಸಿದವರು. ಇವರಿಗೆ ಟೀಕೆ ಮಾಡುವ ಯಾವುದೇ ನೈತಿಕತೆ ಇಲ್ಲ ಎಂದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


