ತುಮಕೂರು: ಮೈದಾಳದ ಕೆರೆಯಲ್ಲಿ ಸೆಲ್ಪಿ ತೆಗೆಯಲು ಹೋಗಿ ಕಾಲು ಜಾರಿಬಿದ್ದ ಘಟನೆಗೆ ಸಂಬಂಧಿಸಿದಂತೆ ತುಮಕೂರು ಎಸ್.ಪಿ. ಅಶೋಕ್ ಕೆ.ವಿ. ಪ್ರತಿಕ್ರಿಯೆ ನೀಡಿದ್ದಾರೆ.
ಬಿಟೆಕ್ ಓದುತ್ತಿರುವ ಹಂಸ ಎಂಬ ಹುಡುಗಿ, ಸ್ನೇಹಿತರ ಜೊತೆ ಕೆರೆಯ ಬಳಿ ಹೋಗಿದ್ದಾಳೆ. ಈ ವೇಳೆ ಕಾಲು ಜಾರಿ ಬಿದ್ದು, ಕಲ್ಲಿನ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ, ಹಾಗೂ ಅಧಿಕಾರಿಗಳು ತೆರಳಿದ್ದಾರೆ. ಮರಳುತುಂಬಿದ ಗೋಣಿ ಹಾಕಿ ನೀರು ನಿಲ್ಲಿಸಿ, ಕಾರ್ಯಾಚರಣೆ ನಡೆಸಿದ್ದು, ಇಂದು ಬೆಳಗ್ಗೆ ಹುಡುಗಿ ಜೀವಂತ ಸಿಕ್ಕಿದ್ದಾರೆ ಎಂದು ತಿಳಿಸಿದ್ದಾರೆ.
ಯುವತಿಯನ್ನು ರಕ್ಷಿಸಿದ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಈಗ ಆಸ್ಪತ್ರೆಯಲ್ಲಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ ಅವರು, ಈ ಘಟನೆಯ ನಂತರ ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜನರು ಇಂತಹ ಸ್ಥಳಕ್ಕೆ ಹೋಗಬಾರದು. ನಮ್ಮ ಇಡೀ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಲೇಕ್ಸ್ ಗಳು ಇವೆ. ಇಷ್ಟು ಲೇಕ್ಸ್ ಗೆ ನಾವು ತೆರಳಿ ಸೆಕ್ಯುರಿಟಿ ಕೊಡುವುದು ಕಷ್ಟ, ಆದರೂ ಆಗಾಗ ಆ ಸ್ಥಳಗಳಿಗೆ ಹೋಗಿ ಚೆಕ್ ಮಾಡಲು ಪೊಲೀಸರಿಗೆ ತಿಳಿಸಿದ್ದೇವೆ. ಜಿಲ್ಲೆಯ ದೊಡ್ಡ ಕೆರೆಗಳ ಬಳಿ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಸಾರ್ವಜನಿಕರು ನಿಮ್ಮ ಮಕ್ಕಳನ್ನು ಕೆರೆಗಳ ಬಳಿ ಹೋಗದಂತೆ ನೋಡಿಕೊಳ್ಳಬೇಕು ಎಂದು ಇದೇ ವೇಳೆ ಅವರು ಪೋಷಕರಿಗೆ ಮನವಿ ಮಾಡಿದರು.
ಯುವತಿ ಬದುಕಿ ಬಂದಿದ್ದೆ ಆಶ್ಚರ್ಯ:
ಹುಡುಗಿ ಕಲ್ಲಿನ ನಡುವೆ ಸಿಕ್ಕಿಕೊಂಡಿದ್ದರು. ಅವರಿಗೆ ಉಸಿರಾಡಲು ಗಾಳಿ ಸಮರ್ಪಕವಾಗಿ ಸಿಕ್ಕಿರುವುದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಇಡೀ ರಾತ್ರಿ ಕತ್ತಲಿನಲ್ಲಿ ನೀರು ಹರಿಯುವ ಶಬ್ದದ ಸ್ಥಳದಲ್ಲಿ ಹುಡುಗಿ ಧೈರ್ಯವಾಗಿದ್ದರು. ಇದು ನಮಗೂ ಒಂದು ಆಶ್ಚರ್ಯಕರವಾದ ವಿಚಾರ. ಅಲ್ಲಿ ಹರಿಯುತ್ತಿದ್ದ ನೀರನ್ನು ನಿಲ್ಲಿಸಿ ಕಾರ್ಯಾಚರಣೆ ನಡೆಸಬೇಕಾಯ್ತು. ಕಾರ್ಯಾಚರಣೆ ತಂಡ ಒಳಗೆ ಹೋಗಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಅಲ್ಲಿ ಅಷ್ಟೊಂದು ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು ಎಂದು ಎಸ್ ಪಿ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q