ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ ಕೊಡಗಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂಳೆಕೆರೆ ಮತ್ತು ಸೂಳೆಕೆರೆ ಪಾಳ್ಯದ ವಾರ್ಡ್ ಸಭೆಯನ್ನು ಸೂಳೆಕೆರೆ ಗ್ರಾಮದ ಗಣಪತಿ ದೇವಾಲಯದ ಆವರಣದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುನಿಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಈ ಸಭೆಗೆ ಸೂಳೆಕೆರೆ ಗ್ರಾಮದ ಸದಸ್ಯೆ ಗೈರು ಹಾಜರಾಗಿದ್ದರು. ಇವರ ಬದಲಾಗಿ ಈಕೆಯ ಪತಿ ಯೋಗೇಶ್ ಕುಮಾರ್ ರವರು ವೇದಿಕೆಯ ಆಸನವನ್ನು ಅಲಂಕರಿಸಿದ್ದರು.
ಈ ಸಭೆಗೆ ಕೇವಲ 4 ರಿಂದ 5 ಮಂದಿ ಸಾರ್ವಜನಿಕರು ಭಾಗವಹಿಸಿದ್ದರು. ಈ ವಾರ್ಡ್ ಸಭೆಯನ್ನು ನಡೆಸುತ್ತಿರುವುದರ ಬಗ್ಗೆ ಎರಡು ವಾರ್ಡ್ ಗಳ ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ನೀಡದೆ, ಏಕಾಏಕಿ ಸಭೆ ನಡೆಸಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಈ ಬಗ್ಗೆ ಪಿ ಡಿ ಓ ಹಾಗೂ ಕಾರ್ಯದರ್ಶಿಯವರಲ್ಲಿ ವಿಚಾರಿಸಿದಾಗ ಸಭೆ ನಡೆಸುವ ಸಂಜೆ ಮೈಕ್ ಮೂಲಕ ಪ್ರಚಾರ ಮಾಡಿದ್ದೇವೆ ಎಂದು ಉತ್ತರ ನೀಡಿದರು.
ಸಭೆಗೆ ಹಾಜರಿದ್ದ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳುವಾಗ ಸದಸ್ಯೆಯ ಪತಿಯೇ ಎಲ್ಲಾ ಅಹವಾಲುಗಳಿಗೆ ತಾನೇ ಸರ್ವಾಧಿಕಾರಿ ಎನ್ನುವಂತೆ ಎಲ್ಲಾದಕ್ಕೂ ಬಾಯಿ ಹಾಕಿ ಉತ್ತರ ಕೊಡುತ್ತಿದ್ದು, ಪಂಚಾಯಿತಿ ಅಧಿಕಾರಿಗಳು ಕೂಡ ಸದಸ್ಯೆಯ ಪತಿಯ ದರ್ಬಾರ್ ಬಗ್ಗೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ ಇದರಿಂದಾಗಿ ಸಾರ್ವಜನಿಕರು ಗೊಂದಲಕ್ಕೀಡಾದರು.
ಈ ಬಗ್ಗೆ ಮಾಧ್ಯಮದ ಪ್ರತಿನಿಧಿಗಳು ಸದಸ್ಯೆಯ ಪತಿಯನ್ನು ಪ್ರಶ್ನಿಸಿದ್ದು, ನೀವೇಕೆ ವೇದಿಕೆಯನ್ನು ಅಲಂಕರಿಸಿದ್ದೀರಿ? ಎಂದು ಕೇಳಿದಾಗ, ಯಾಕೆ ನಾನು ಅಲಂಕರಿಸಬಾರದೆಂದು ದರ್ಪದಿಂದ ಮಾತನಾಡಿದ್ದಾರೆ. ಇದರ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಗಳು ಕೊಡ ಸಮಜಾಯಿಸಿ ಉತ್ತರವನ್ನು ಕೊಡುತ್ತಾ, ಕಾನೂನು ನಿಯಮಗಳ ಅರಿವೇ ಇಲ್ಲದವರಂತೆ ಸಭೆಯನ್ನು ಮುಂದುವರಿಸಿದರು.
ಸಭಾ ನಡವಳಿ ಪುಸ್ತಕದಲ್ಲಿ ಸಹಿ ಮಾಡಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಡವಳಿಗಳನ್ನು ಬರೆಯದೆ ಖಾಲಿ ಹಾಳೆಗೆ ಸಾರ್ವಜನಿಕರ ಸಹಿ ಪಡೆಯಲು ಮುಂದಾದರು. ಈ ವೇಳೆ ಆರ್ ಟಿಐ ಕಾರ್ಯಕರ್ತ ರುದ್ರೇಶ್ ಹಾಗೂ ಮುಖಂಡರಾದ ಚಂದ್ರಣ್ಣನವರು ಪ್ರಶ್ನಿಸಿ ಸಹಿ ಮಾಡದೆ ವಾಪಸ್ ಕಳುಹಿಸಿದರು.
ಈ ಸಭೆಯು ವಿಫಲವಾಗಿದೆ ಮತ್ತೊಮ್ಮೆ ನೋಟಿಸ್ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಸಭೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದರು. ಸಭೆ ಮುಗಿದ ಬಳಿಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿವಯ್ಯರವರು ಹೊರಗೆ ಬಂದು ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರನ್ನು ಕರೆದು ಸಹಿ ಪಡೆದಿರುವ ಪ್ರಸಂಗವು ನಡೆದಿತ್ತು.
ಒಟ್ಟಾರೆ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಕಾಟಾಚಾರಕ್ಕೆ ಸರ್ಕಾರಕ್ಕೆ ಮಾಹಿತಿಯನ್ನು ನೀಡುವ ಸಲುವಾಗಿ ಈ ವಾರ್ಡ್ ಸಭೆ ಕರೆದಿದ್ದು ಎಷ್ಟು ಸಮಂಜಸ ಎಂಬುವುದು ಪ್ರಶ್ನೆಯಾಗಿದೆ.
ಪತ್ನಿಯ ಬದಲಿಗೆ ಪತಿಯೇ ವೇದಿಕೆಯಲ್ಲಿ ಕುಳಿತು ಶಿಷ್ಟಾಚಾರ ಉಲ್ಲಂಘನೆ ಮಾಡಿದ ಬಗ್ಗೆ ಸಾರ್ವಜನಿಕರಲ್ಲಿ ಗುಸು-ಗುಸು ಮಾತಾಯಿತು ಮತ್ತು ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳನ್ನು ದೂಷಿಸಿದರು ಇನ್ನಾದರೂ ಈ ಬಗ್ಗೆ ಮೇಲಧಿಕಾರಿಗಳು ಇದರ ಗಮನವನ್ನು ಹರಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಮತ್ತು ಶಿಷ್ಟಾಚಾರ ಉಲ್ಲಂಘನೆ ಮಾಡುವಲ್ಲಿ ಭಾಗಿಯಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz