ತುಮಕೂರು: ಸಂಸ್ಕಾರ ಪಠ್ಯಪುಸ್ತಕಗಳನ್ನು ಓದುವುದರಿಂದ ಬರುವುದಲ್ಲ. ಮನೆತನದಿಂದ ಸಂಸ್ಕಾರ ಬೆಳೆಯಬೇಕು. ಸಂಸ್ಕಾರಯುತ ವ್ಯಕ್ತಿಗಳಿಂದ ಮಾತ್ರ ಸ್ವಸ್ಥಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ ಕುಮಾರ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿದ ಅವರು, ವ್ಯಕ್ತಿಗಳು ಕಾನೂನನ್ನು ಓದಿ ಅದನ್ನು ಪಾಲಿಸುವುದು ಬೇರೆ, ಹಿರಿಯರಿಗೆ, ತಂದೆ ತಾಯಿಯರಿಗೆ ಗೌರವ ಕೊಡುವುದೇ ಬೇರೆ ಎಂದರು.
ವಿದ್ಯಾರ್ಥಿಗಳು ಬರೀ ತರಗತಿ, ಮೊಬೈಲ್ ಗಳಿಗೆ ಸೀಮಿತವಾಗದೆ ಸ್ಪರ್ಧೆ, ಕ್ರೀಡೆ, ಸಂಗೀತ, ಮನರಂಜನೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ತುಮಕೂರಿನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಮಾತನಾಡಿ, ಎಲ್ಲರಿಗೂ ಮೂರು ಮುಖವಿದೆ. ಅದರಲ್ಲಿಒಂದು ಜಗತ್ತಿಗೆ ತೋರಿಸುವ ಮುಖ, ಎರಡನೆಯದ್ದು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ತೋರಿಸುವ ಮುಖ, ಮೂರನೆಯದ್ದು ಯಾರಿಗೂ ತೋರಿಸದೆ ಇರುವಂತಹ ಮುಖ. ಈ ಮೂರನೇ ಮುಖವೇ ನಮ್ಮ ಪ್ರತಿಬಿಂಬ, ನಾವು ಯಾವ ಮುಖವನ್ನು ತೊಟ್ಟರೂ ನೈತಿಕತೆ ಮತ್ತು ಶಿಸ್ತನ್ನು ಪಾಲಿಸಬೇಕು ಎಂದರು.
ನಾವೆಲ್ಲರೂ ವಿದ್ಯಾವಂತರಾಗಿ ಮಾನವೀಯತೆಯನ್ನು ಮರೆಯುತ್ತಿದ್ದೇವೆ. ಆದರೆ ಕರ್ಮಫಲ ನಮ್ಮನ್ನು ಬಿಡುವುದಿಲ್ಲ. ನಾವು ಮಾತನಾಡುವುದಕ್ಕಿಂತ ನಮ್ಮ ಕೆಲಸಗಳು ಹೆಚ್ಚು ಮಾತನಾಡಬೇಕು. ವ್ಯಕ್ತಿ ಹೋದರೂ ವ್ಯಕ್ತಿತ್ವ ಉಳಿಯುವಂತೆ ಬದುಕಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳು ಬರೀ ಪದವಿಯನ್ನು ಪಡೆಯಲು ಬರಬಾರದು. ಯಾರು ಜ್ಞಾನವನ್ನು ಪಡೆಯಲು ಬರುತ್ತಿರುತ್ತಾರೋ ಅವರು ಹೆಚ್ಚು ಜ್ಞಾನವನ್ನು ಪಡೆಯುತ್ತಾರೆ ಮತ್ತು ಸಮಾಜದ ಆಸ್ತಿಯಾಗುತ್ತಾರೆ ಎಂದರು.
ಎಲ್ಲಿಯೇ ಅನ್ಯಾಯ ನಡೆದರೂ ಅದರ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ನಾವು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗುವ ರೀತಿಯಲ್ಲಿ ಕೆಲಸ ಮಾಡಬೇಕು. ನಾವು ಯಾವಾಗ ಬದಲಾಗುತ್ತೇವೆಯೋ ಆಗ ವ್ಯವಸ್ಥೆ ಕೂಡ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್ ಜಮ್, ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ಸಂಯೋಜಕರದ ಪ್ರೊ.ಎ.ಮೋಹನ್ ರಾಮ್ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4