ತುಮಕೂರು: ಕೆರೆ ಕೋಡಿ ನೀರು ಹರಿಯುವ ಜಾಗದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿಯೊಬ್ಬಳನ್ನು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ಈ ಘಟನೆ ನಡೆದಿದೆ. ಹಂಸ (19) ಅಪಾಯದಿಂದ ಪಾರಾದ ಯುವತಿಯಾಗಿದ್ದಾಳೆ. ಅಗ್ನಿಶಾಮಕ ದಳದ ಸಿಬ್ಬಂದಿ ಬರೋಬ್ಬರಿ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಯುವತಿಯ ಪ್ರಾಣ ಉಳಿಸಿದ್ದಾರೆ.
ಘಟನೆಯ ವಿವರ:
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಅವರ ಪುತ್ರಿ ಹಂಸ, ನಿನ್ನೆ ರಜೆ ಹಿನ್ನೆಲೆ ಸ್ನೇಹಿತರ ಜೊತೆ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದಳು. ಈ ವೇಳೆ ಅಲ್ಲೆ ಸಮೀಪದಲ್ಲಿರುವ ಮೈದಾಳ ಕೆರೆ ತುಂಬಿ ಕೋಡಿ ಬಿದ್ದಿತ್ತು. ಅದನ್ನ ನೋಡಲು ತೆರಳಿದ್ದ ಯುವತಿ, ಕೆರೆ ಕೋಡಿ ನೀರು ಹರಿಯುವ ಸ್ಥಳದಲ್ಲಿ ನಿಂತು ಸೆಲ್ಪಿ ಪೋಟೋ ತೆಗೆದುಕೊಳ್ಳಲು ಮುಂದಾಗಿದ್ದು, ಈ ವೇಳೆ ಕಾಲು ಜಾರಿ ಬಿದ್ದಿದ್ದು, ಕೋಡಿಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗಿದ್ದಳು.
ವಿಷಯ ತಿಳಿದು ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ನಿನ್ನೆ ಸಂಜೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ರು. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಯುವತಿಯ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಯಿತು. ಕೆರೆ ಕೋಡಿ ನೀರನ್ನ ಬೇರೆಡೆಗೆ ಡೈವರ್ಟ್ ಮಾಡಿ ಕಾರ್ಯಾಚರಣೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕಲ್ಲಿನ ಪೊಟರೆಯೊಳಗೆ ಸಿಲುಕಿಕೊಂಡಿರುವುದು ಪತ್ತೆಯಾಗಿತ್ತು. ಕೊನೆಗೂ ಯುವತಿಯನ್ನು ರಕ್ಷಣೆ ಮಾಡಲಾಗಿದೆ.
ಕೋಡಿ ಹರಿಯುತ್ತಿರುವ ನೀರಿನ ಪಕ್ಕ ಸೆಲ್ಫಿ ತೆಗೆದುಕೊಳ್ಳುವುದು, ನಿಂತುಕೊಳ್ಳುವುದು ಮಾಡಬಾರದು ಎಂದು ತುಮಕೂರು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರೂ, ಸಾರ್ವಜನಿಕರು ತಿಳಿದೂ ತಿಳಿದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ದುರಂತ. ಜಿಲ್ಲಾಡಳಿತದ ಸೂಚನೆಗಳನ್ನು ಸಾರ್ವಜನಿಕರು ಇನ್ನಾದರೂ ತಪ್ಪದೇ ಪಾಲಿಸಿ, ನಿಮ್ಮ ಸುರಕ್ಷತೆ ಕೇವಲ ಜಿಲ್ಲಾಡಳಿತದ ಜವಾಬ್ದಾರಿ ಮಾತ್ರವಲ್ಲ, ನಿಮ್ಮ ಜವಾಬ್ದಾರಿ ಕೂಡ ಎನ್ನುವುದನ್ನು ತಿಳಿಯಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q