ಸಿರಾ: ಸಿರಾ ಕ್ಷೇತ್ರದ ಶಾಸಕರಾದ ಟಿ.ಬಿ. ಜಯಚಂದ್ರ ಅವರು ನುರಿತ ರಾಜಕೀಯ ಮುತ್ಸದ್ದಿಯಷ್ಟೇ ಅಲ್ಲದೆ ಕಳೆದ 50 ವರ್ಷಗಳ ರಾಜಕೀಯ ಅನುಭವದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಿನಂತೆ ಪಕ್ಷಕ್ಕೆ ದುಡಿದಿದ್ದಾರೆ. ಇಂತಹ ಹಿರಿಯ ಜೀವಕ್ಕೆ ಸಚಿವ ಸ್ಥಾನ ನೀಡುವಂತೆ ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಂಜನ್ ಕುಮಾರ್ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಯುವ ಕಾಂಗ್ರೆಸ್ ಘಟಕದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಯಚಂದ್ರ ಅವರಿಗೆ ಈವರೆಗೆ ಕಾಂಗ್ರೆಸ್ ಪಕ್ಷದ ಸರ್ಕಾರಗಳಲ್ಲಿ ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ, ಕೃಷಿ, ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಅನುಭವ ಇದೆ ಎಂದರು.
ಸಿದ್ದರಾಮಯ್ಯ ಅವರ ಈ ಹಿಂದಿನ 5 ವರ್ಷಗಳ ಸರ್ಕಾರದ ಅವಧಿಯಲ್ಲಿ 29 ಕ್ಕೂ ಹೆಚ್ಚು ಸಮಿತಿಗಳ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿ ಇಡೀ ರಾಜ್ಯದಲ್ಲಿ ಓರ್ವ ಉತ್ತಮ ಶಾಸಕ ಎಂದು ಸರ್ಕಾರದಿಂದಲೇ ಪ್ರಶಸ್ತಿಯನ್ನೂ ಪಡೆದು ಅಭಿನಂದಿಸಲಾಗಿದೆ. ಇಂತಹ ಅನುಭವಿ ಶಾಸಕರಿಗೆ 20 ಮಂದಿಗೆ ಸಚಿವ ಸ್ಥಾನ ನೀಡುವ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಬೇಕೆಂದು ಅಂಜನ್ ಕುಮಾರ್ ಆಗ್ರಹಿಸಿದರು.
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್ ಮಾತನಾಡಿ, ಹಿರಿಯ ರಾಜಕಾರಣಿ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ಹಾಗೂ ಜಮೀರ್ ಅಹಮದ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದರು.
ಎನ್ ಎಸ್ ಯುಐ ಅಧ್ಯಕ್ಷ ರಂಗನಾಥ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರುಗಳಾದ ಹೇಮಂತ್, ಮಣಿಕಂಠ ಸೇರಿದಂತೆ ಅನೇಕ ಪ್ರಮುಖರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


