ಕೊರಟಗೆರೆ : ದೇವರ ಅಸ್ತಿತ್ವ ಮತ್ತು ಶಕ್ತಿಯನ್ನು ಅರಿಯಬೇಕಾದರೆ ಆಧ್ಯಾತ್ಮಿಕ ಸಾಧನೆಯ ಮೂಲಕ ದೇವರನ್ನು ಅನುಭವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಜಗಜ್ಯೋತಿ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ರಾತ್ರಿ ನಡೆದ ಕಡೆಯ ಶ್ರಾವಣ ವಿಶೇಷ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ದೇವರನ್ನು ಕಣ್ಣಿಂದ ನೋಡಲು ಸಾಧ್ಯವಾಗದಿದ್ದರೂ, ಆಧ್ಯಾತ್ಮಿಕ ಸಾಧನೆಯ ಮೂಲಕ ಅವರ ಅಸ್ತಿತ್ವವನ್ನು ಅನುಭವಿಸಲು ಸಾಧ್ಯ. ಧರ್ಮ ಮತ್ತು ಆಚರಣೆಗಳ ವಿಚಾರದಲ್ಲಿ ಪ್ರಶ್ನಿಸುವ ಮನೋಭಾವ ಇರಬೇಕು. ಆದರೆ ನಂಬಿಕೆಯ ಹೆಸರಿನಲ್ಲಿ ಮೂಢನಂಬಿಕೆಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಇಂದಿನ ಒತ್ತಡದ ಬದುಕಿನಲ್ಲಿ ಆಧ್ಯಾತ್ಮಿಕತೆ ಅತ್ಯವಶ್ಯಕವಾಗಿದೆ. ಜೀವನದ ಕೊನೆಯ ಹಂತದಲ್ಲಿ ಆಧ್ಯಾತ್ಮಿಕ ಸಾಧನೆ ಆರಂಭಿಸುವ ಬದಲು, ದೇಹದಲ್ಲಿ ಶಕ್ತಿ ಮತ್ತು ಮನಸ್ಸಿನಲ್ಲಿ ಚೈತನ್ಯ ಇರುವಾಗಲೇ ಆತ್ಮಶುದ್ಧಿ ಮತ್ತು ಆಧ್ಯಾತ್ಮಿಕ ಚಿಂತನೆಗೆ ಮುಂದಾಗಬೇಕು. ಬದುಕಿನಲ್ಲಿ ನಿಜವಾದ ನೆಮ್ಮದಿ ಮತ್ತು ಆನಂದ ಪಡೆಯಲು ಆಧ್ಯಾತ್ಮಿಕತೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಸುರೇಶ್ ಕೆ.ಎಂ., ಉಪಾಧ್ಯಕ್ಷ ಕೆ.ಸಿ. ಶಿವಕುಮಾರ್, ಕಾರ್ಯದರ್ಶಿ ಕೆ.ಬಿ. ಜಗದೀಶ್, ಖಜಾಂಚಿ ಕೆ.ಆರ್. ಕಿರಣ್, ಬಸವ ಸದನ ಕಟ್ಟಡ ಸಮಿತಿ ಅಧ್ಯಕ್ಷ ಡೈರಿ ಸದಾಶಿವಯ್ಯ, ಮುಖಂಡರಾದ ಉಮೇಶ್, ರೇಣುಕಾ ಪ್ರಸಾದ್, ವೀರೇಶ್, ದಿನೇಶ್, ಶಿಕ್ಷಕ ರಾಜಶೇಖರ್, ಗಂಗಾಧರ್, ಕಾಳಪ್ಪ, ಶಿವಲಿಂಗಯ್ಯ, ಬಸವರಾಜು ಸೇರಿದಂತೆ ಭಕ್ತರು ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
