ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕಂಡ ಕಂಡಲ್ಲಿ ಮಾತನಾಡುವ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವ, ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಬಿಜೆಪಿ ಹೈಕಮಾಂಡ್ ನ್ನು ಒತ್ತಾಯ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ್ ಅವರು ಪದೇ ಪದೇ ಅಧ್ಯಕ್ಷರ ಬಗ್ಗೆ ಮಾತನಾಡುತ್ತಿದ್ದಾರೆ. ಅನಗತ್ಯವಾಗಿ ಚರ್ಚೆ ಮಾಡುತ್ತಿದ್ದಾರೆ. ಕಂಡ ಕಂಡಲ್ಲಿ ಮಾತಾಡುತ್ತಾರೆ. ಯಡಿಯೂರಪ್ಪ ಮಗನನ್ನ ನಾವು ಒಪ್ಪಲ್ಲ ಅಂತಾರೆ. ವಿಜಯೇಂದ್ರ ಅವರನ್ನ ಅಧ್ಯಕ್ಷ ಮಾಡೋದಾಗಿ ನಡ್ಡಾ, ಅಮಿತ್ ಶಾ, ಮೋದಿ ಅವರು ಎಲ್ಲರ ಅಭಿಪ್ರಾಯ, ಸರ್ವೆ, ಸಂಘ ಪರಿವಾರದ ಸಲಹೆ ಪಡೆದು ನೇಮಕ ಮಾಡಿದ್ದಾರೆ. ಹೈಕಮಾಂಡ್ ನೇಮಕ ಮಾಡಿರೋರ ವಿರೋಧ ಮಾಡಿದರೆ ಹೈಕಮಾಂಡ್‌ಗೆ ವಿರೋಧ ಮಾಡಿದಂತೆ ಆಗುತ್ತದೆ. ಏನಾದರು ಇದ್ದರೆ ಹೈಕಮಾಂಡ್ ಬಳಿ ಹೋಗಿ ಮಾತಾಡಲಿ. ಅದು ಬಿಟ್ಟು ಕಂಡ ಕಂಡಲ್ಲಿ ಮಾತಾಡುತ್ತಾರೆ ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ತಮ್ಮ ವರ್ತನೆ ತಿದ್ದುಕೊಳ್ಳದೇ ಹೋದರೆ ನಾವು ಹೈಕಮಾಂಡ್ ನಾಯಕರಿಗೆ ದೂರು ಕೊಡುತ್ತೇವೆ, ವಿಜಯೇಂದ್ರಗೆ ಈಗ 49–50 ಆಸುಪಾಸು. ಯತ್ನಾಳ್ ರಾಜಕೀಯಕ್ಕೆ ಬಂದಾಗ ಅವರದ್ದು 45 ವಯಸ್ಸು. ಅವತ್ತು ಹೀಗೆ ಎಲ್ಲರು ಮಾತನಾಡಿದ್ದರೆ ಹೇಗೆ. ಯತ್ನಾಳ್ ಹೀಗೆ ಮಾತನಾಡುತ್ತಿದ್ದರೆ ನಾವೇ ಹೈಕಮಾಂಡ್‌ಗೆ ದೂರು ನೀಡುತ್ತೇವೆ ಎಂದು ಎಚ್ಚರಿಸಿದರು.
ಕಟೀಲ್, ಪ್ರಮೋದ್ ಸಾವಂತ್, ಫಡ್ನವಿಸ್ ಅವರು ಚಿಕ್ಕ ವಯಸ್ಸಿನಲ್ಲಿ ಅಧ್ಯಕ್ಷರು ಆದವರು. ಅದರಲ್ಲಿ ಏನು ತಪ್ಪಿದೆ. ಯತ್ನಾಳ್ 45 ವರ್ಷಕ್ಕೆ ಮಂತ್ರಿ ಆಗಿರೋದು ಮರೆತು ಹೋದ್ರಾ? ಇವತ್ತು ವಿಜಯೇಂದ್ರ ಸಂಘಟನೆ ಮಾಡಿದ್ದಾರೆ. ಪಾದಯಾತ್ರೆ ಮಾಡಿ ಸಿಎಂ ರಾಜೀನಾಮೆ ಹಂತಕ್ಕೆ ಹೋಗಿದೆ. ವಿಜಯೇಂದ್ರ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296