೨೩ ಬಾರಿ ಸಿಂಗಲ್ಸ್ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದುಕೊಂಡಿರುವ ಖ್ಯಾತ ಮಹಿಳಾ ಟೆನಿಸ್ ತಾರೆ, ಅಮೆರಿಕಾದ ಸೆರೆನಾ ವಿಲಿಯಮ್ಸ್ ಇದೀಗ ಟೆನಿಸ್ ಜೀವನಕ್ಕೆ ನಿವೃತ್ತಿಯ ಸನಿಹಕ್ಕೆ ಬಂದಿದ್ದಾರೆ. ಮುಂದೆ ನಡೆಯಲಿರುವ ಯುಎಸ್ ಓಪನ್ ಬಳಿಕ ಟೆನಿಸ್ ಜೀವನಕ್ಕೆ ಗುಡ್‌ಬೈ ಹೇಳಲಿದ್ದೇನೆ ಎಂದು ಸೆರೆನಾ ತಿಳಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಹಲವು ತಿಂಗಳ ಕಾಲ ಟೆನಿಸ್‌ನಿಂದ ದೂರ ಉಳಿದಿದ್ದ ಸೆರೆನಾ, ಕಳೆದ ಜೂನ್‌ನಲ್ಲಿ ನಡೆದ ವಿಂಬಲ್ಡನ್‌ಗೆ ಮರಳಿದ್ದರು. ಆದರೆ ಮೊದಲ ಪಂದ್ಯದಲ್ಲೇ ಸೋಲುಂಡು ಅಭಿಮಾನಿಗಳಲ್ಲಿ ಆಘಾತ ಮೂಡಿಸಿದ್ದರು. ಇದೀಗ ಸದ್ಯ ನಡೆಯುತ್ತಿರುವ ಟೊರಂಟೋ ಓಪನ್‌ನ ಮೊದಲ ಸುತ್ತಿನಲ್ಲಿ ಸ್ಪೇನ್‌ನ ನುರಿಯಾ ಪರಿಝಾಸ್ ಡಿಯಾಸ್ ಗೆಲುವು ಸಾಧಿಸಿ, ಎರಡನೇ ಸುತ್ತಿಗೆ ಪ್ರವೇಶಿಸಿದ ಬಳಿಕ ಸೆರೆನಾ ಅವರು ನಿವೃತ್ತಿಯ ಹೇಳಿಕೆ ಘೋಷಿಸಿದ್ದಾರೆ.
ನಾನು ನಿವೃತ್ತಿ ಎಂಬ ಪದವನ್ನು ಎಂದಿಗೂ ಇಷ್ಟಪಟ್ಟಿಲ್ಲ. ಇದು ನನಗೆ ಆಧುನಿಕ ಪದದಂತೆ ಅನಿಸುವುದಿಲ್ಲ. ನಾನು ಇದನ್ನು ಪರಿವರ್ತನೆ ಎಂದು ಯೋಚಿಸುತ್ತಿದ್ದೇನೆ. ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ. ಬಹುಶಃ ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಲು ಅತ್ಯುತ್ತಮ ಪದವೆಂದರೆ ವಿಕಾಸ. ನಾನು ಟೆನಿಸ್‌ನಿಂದ ದೂರವಾಗಿ, ನನಗೆ ಮುಖ್ಯವಾದ ಇತರ ವಿಷಯಗಳ ಕಡೆಗೆ ವಿಕಸನಗೊಳ್ಳುತ್ತಿದ್ದೇನೆ.
ಜೀವನದಲ್ಲಿ ನಾವು ಬೇರೆ ದಿಕ್ಕಿನಲ್ಲಿ ಚಲಿಸಲು ನಿರ್ಧರಿಸಬೇಕಾದ ಸಮಯ ಬರುತ್ತದೆ. ನೀವು ಏನನ್ನಾದರೂ ತುಂಬಾ ಪ್ರೀತಿಸಿದಾಗ ಆ ಸಮಯ ಯಾವಾಗಲೂ ಕಠಿಣವಾಗಿರುತ್ತದೆ. ನಾನು ಟೆನಿಸ್ ಅನ್ನು ಆನಂದಿಸುತ್ತೇನೆ. ಆದರೆ ಇದೀಗ ಕ್ಷಣಗಣನೆ ಶುರುವಾಗಿದೆ. ನಾನು ತಾಯಿಯಾಗಿರುವುದರ ಬಗ್ಗೆ ಹಾಗೂ ನನ್ನ ಆಧ್ಯಾತ್ಮಿಕ ಗುರಿಗಳ ಮೇಲೆ ಗಮನ ಹರಿಸಲಿದ್ದೇನೆ. ಹಾಗಾಗಿ ಮುಂದಿನ ಕೆಲವು ವಾರಗಳನ್ನು ನಾನು ಸವಿಯಲಿದ್ದೇನೆ. ಕೆಲವು ವರ್ಷಗಳ ಹಿಂದೆ ನಾನು ಸದ್ದಿಲ್ಲದೆ ಸೆರೆನಾ ವೆಂಚರ್ಸ್, ವೆಂಚರ್ ಕ್ಯಾಪಿಟಲ್ ಸಂಸ್ಥೆಗಳನ್ನು ಪ್ರಾರಂಭಿಸಿದೆ.
ಅದರ ನಂತರ ಕುಟುಂಬ ಪ್ರಾರಂಭಿಸಿದೆ. ಹೀಗಾಗಿ ಸದ್ಯ ನಾನು ಆ ಕುಟುಂಬವನ್ನು ಬೆಳೆಸಲು ಬಯಸುತ್ತೇನೆ ಎಂದು ೪೦ರ ಹರೆಯದ ಸೆರೆನಾ ಅಂಕಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. 2012ರಲ್ಲಿ ಸೆರೆನಾ ಅವರು ಕೊನೆಯ ಬಾರಿಗೆ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿದ್ದು, ಅದರ ಬಳಿಕ ಹೇಳಿಕೊಳ್ಳುವಂಥ ಯಾವುದೇ ಸಾಧನೆ ಪ್ರದರ್ಶಿಸಿರಲಿಲ್ಲ. ಅದೂ ಅಲ್ಲದೆ ಗಾಯದ ಸಮಸ್ಯೆಯಿಂದ ಸೆರೆನಾ ಹಲವು ಪ್ರತಿಷ್ಟಿತ ಟೂರ್ನಿಗಳನ್ನು ತಪ್ಪಿಸಿಕೊಂಡಿದ್ದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy