ತುಮಕೂರು: ತಮ್ಮ ವಿರುದ್ಧ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ರವರು ಏಕಾಏಕಿ ನಿಂದಿಸಿ ಅವಮಾನಗೊಳಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡಬೇಕೆಂದು ಅಲೆಮಾರಿ ಜನಾಂಗದ ಕುಟುಂಬಸ್ಥರು ಎಸ್.ಪಿ.ರವರಿಗೆ ದೂರು ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಕಳೆದ ತಿಂಗಳು ಸುರಿದ ಕುಂಭದ್ರೋಣ ಮಳೆಯಿಂದಾಗಿ ಚಿ.ನಾ.ಹಳ್ಳಿ ತಾಲ್ಲೋಕಿನ ಕಡೆಗೆಹಳ್ಳಿ ಗ್ರಾಮದ ಗುಂಡು ತೋಪಿನಲ್ಲಿ ಅಲೆಮಾರಿ ಜನಾಂಗದವರು ವಾಸಿಸುತ್ತಿದ್ದ ಗುಡಿಸಲುಗಳು ಜಲಾವೃತವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಸೂರು ಕಲ್ಪಿಸಲಾಗಿತ್ತು. ನಂತರ ಕೆಲ ದಿನಗಳ ನಂತರ ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್ ಬಂದು ಕೂಡಲೇ ತಮ್ಮ ಗುಡಿಸಲುಗಳಿಗೆ ತೆರಳುವಂತೆ ಒತ್ತಡ ಹೇರಿದ್ದಾರೆ.
ಇದಕ್ಕೂ ಮುನ್ನ ಅಲೆಮಾರಿ ಜನಾಂಗದ ಪರಮೇಶ್ ಎಂಬಾತ ತಹಶೀಲ್ದಾರ್ ರವರಿಗೆ ಮಳೆಯಿಂದಾಗಿ ಗುಡಿಸಲು ನಾಶವಾಗಿದೆ, ಈಗ ಗುಡಿಸಲಿಗೆ ಹೋಗಲು ಸಾಧ್ಯವಾಗುವುದಿಲ್ಲ, ಕನಿಷ್ಠ ಅದಕ್ಕೆ ಪರಿಹಾರ ನೀಡಿದರೆ ಗುಡಿಸಲು ಮರು ನಿರ್ಮಾಣ ಮಾಡಿಕೊಂಡು ಬದುಕುತ್ತೇವೆಂದು ಮನವಿ ಸಲ್ಲಿಸಿರುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕಚೇರಿಗೆ ಬಂದು ಪರಿಹಾರದ ಚೆಕ್ ಪಡೆದುಕೊಂಡು ಹೋಗು ಎಂದು ತಿಳಿಸಿರುತ್ತಾರೆ.
ಪರಿಹಾರ ಪಡೆಯಲು ಮರುದಿನ ಕಚೇರಿಗೆ ತೆರಳಿದ ಸಂದರ್ಭದಲ್ಲಿ ಏಕಾಏಕಿ ಪರಮೇಶ್ ಗೆ ಸಾರ್ವಜನಿಕರ ಮುಂದೆ ನಿಂದಿಸಿ 107, 109, ರೌಡಿಶೀಟರ್, ಗಡಿಪಾರು ಈ ಪದಗಳು ಗೊತ್ತಿಲ್ಲ ನಿನಗೆ, ಇವಲ್ಲವನ್ನೂ ನಿನ್ನ ಮೇಲೆ ಹಾಕಿಸುತ್ತೇನೆಂದು ಮನಸೋ ಇಚ್ಛೆ ನಿಂದಿಸಿದರು. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿ.ನಾ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಬಂದಿರುವುದಾಗಿ ತಿಳಿಸಿದರು.
ಇನ್ನು ನೊಂದವರ ಪರವಾಗಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ನಿಂತಿದ್ದು ವೇದಿಕೆಯ ಜಿಲ್ಲಾಧ್ಯಕ್ಷ ನಾಗಭೂಷಣ್ ಹಂದ್ರಾಳ್ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ನೌಕರ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಸಹಿಸುವುದಿಲ್ಲ. ಕೂಡಲೇ ತಹಶೀಲ್ದಾರ್ ರವರ ಮೇಲೆ ಎಫ್.ಐ.ಆರ್.ದಾಖಲಿಸಬೇಕು.. ಇಲ್ಲವಾದಲ್ಲಿ ತಾವು ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಸಿದರು
ಬಡವರ ನೆರವಿಗೆ ಧಾವಿಸಬೇಕಾದ ಅಧಿಕಾರಿಗಳೇ ಹೀಗೆ ಸೌಜನ್ಯ ಇಲ್ಲದ ರೀತಿಯಲ್ಲಿ ವರ್ತಿಸಿದರೆ ದಲಿತರು ನೊಂದವರು ಯಾರಬಳಿ ನ್ಯಾಯ ಕೇಳಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ
ವರದಿ: ರಾಜೇಶ್ ರಂಗನಾಥ್ ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy