ಮಗ ಚುರುಕಿಲ್ಲ, ಮಕ್ಕಳಾಗುವುದು ಅನುಮಾನ, ಹಾಗಾಗಿ ತನ್ನಿಂದಲೇ ವಂಶ ಬೆಳೆಯಲಿ ಎಂದು ಸೊಸೆಯ ಮೇಲೆ ಕಣ್ಣು ಹಾಕಿದ ಮಾವನನ್ನು ಸುಪಾರಿ ಕೊಟ್ಟು ಬೀಗರೇ ಹತ್ಯೆ ಮಾಡಿಸಿರುವ ಘಟನೆ ಹಾಸನದ ಹೊಳೆನರಸೀಪುರ ತಾಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಮ್ಮೇಗೌಡ (55) ಕೊಲೆಯಾದ ವ್ಯಕ್ತಿ. ನ.13 ರಂದು ರಾಗಿಕಾವಲು ಗ್ರಾಮದ ಹೊಸಕೆರೆಯಲ್ಲಿ ತಮ್ಮೇ ಗೌಡನ ಶವ ಪತ್ತೆಯಾಗಿತ್ತು. ಮುಖವನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಕೆರೆಗೆ ಎಸೆಯಲಾಗಿತ್ತು. ಮೃತನ 3ನೇ ಮಗ ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಮಾವ ತಮ್ಮೇಗೌಡ ಸೊಸೆ ನಾಗರತ್ನಾಳಿಗೆ ತನ್ನಿಂದಲೇ ವಂಶ ಬೆಳೆಯಲಿ ಎಂದು ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಮಾವನ ನೀಚ ಬುದ್ಧಿ ಬಗ್ಗೆ ತನ್ನ ಪೋಷಕರ ಬಳಿ ಸೊಸೆ ಹೇಳಿಕೊಂಡ ನಂತರ ನಾಗರತ್ನಾಳ ಪೋಷಕರಾದ ಮೈಲಾರಗೌಡ ಹಾಗೂ ತಾಯಮ್ಮ 50 ಸಾವಿರಕ್ಕೆ ಕೊಲೆ ಸುಪಾರಿ ನೀಡಿದ್ದಾರೆ.
ತಮ್ಮ ಮನೆಯಲ್ಲೇ ಮದ್ಯ ಕುಡಿಸಿ ರಾಡ್‌ನಿಂದ ಬಲವಾಗಿ ಹೊಡೆದು ಕೊಲೆ ಮಾಡಿಸಿ ಶವವನ್ನ ಕೆರೆಗೆ ಬಿಸಾಡಿದ್ದಾರೆ. ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದ ಹಳ್ಳಿಮೈಸೂರು ಠಾಣೆ ಪೊಲೀಸರು ಕೊಲೆ ಆರೋಪಿಗಳಾದ ಯೋಗೇಶ್, ಚಂದ್ರೇಗೌಡ, ಮೈಲಾರಿಗೌಡ, ಆತನ ಪತ್ನಿ ತಾಯಮ್ಮ ಅವರನ್ನು ಬಂಧಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy