ತುಮಕೂರು: ನವಭಾರತ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು. ಭಾರತವನ್ನು ಸುಭದ್ರವನ್ನಾಗಿ ಮಾಡುವ ಜವಾಬ್ದಾರಿ ಎಲ್ಲರದು ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿಜಪಾನಂದಜೀ ಮಹಾರಾಜ್ ಹೇಳಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ವತಿಯಿಂದ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 162ನೇ ಜನ್ಮ ಮಹೋತ್ಸವದ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ನೆರವೇರಿಸಿ ಮಾತನಾಡಿದ ಅವರು, ದೇಶಕ್ಕೋಸ್ಕರ ಜೀವನದುದ್ದಕ್ಕೂ ಪ್ರಾರ್ಥನೆ ಮಾಡಿ, ದೇಶವು ಪಾಶ್ಚಿಮಾತ್ಯರ ಹಿಡಿತದಿಂದ ಮುಕ್ತಿ ಪಡೆಯಬೇಕು ಎಂದು ಹೋರಾಡಿದ ಮಹಾನ್ ವ್ಯಕ್ತಿ ವಿವೇಕಾನಂದರು ಎಂದರು.
ನನ್ನ ದೇಶಕ್ಕೆ ನಾನು ಏನು ಮಾಡಬಲ್ಲೆ? ನನ್ನ ಸಂಸ್ಕೃತಿಗೆ ನನ್ನಕೊಡುಗೆ ಏನು? ಎಂದು ನೀವೇ ಪ್ರಶ್ನಿಸಿಕೊಳ್ಳಿ. ಮಂಗಳಕ್ಕೆ ಹೋದ ನಾವು ಮನದ ಅಂಗಳಕ್ಕೆ ಹೋಗುವುದಕ್ಕೆ ವಿಫಲ ಆಗುತ್ತಿದ್ದೇವೆ ಎಂದರು.
ಶಾಲೆಯ ಶಿಕ್ಷಣದಲ್ಲಿ ಅಗತ್ಯ ವಿಚಾರಗಳಿಗಿಂತ ಅನಗತ್ಯ ವಿಚಾರಗಳನ್ನು ತುಂಬುತ್ತಿದ್ದಾರೆ. ಸ್ವಾಮಿ ವಿವೇಕಾನಂದರವರ ವಿಚಾರಧಾರೆ ಕಣಕಣದಲ್ಲಿ ಬರಬೇಕು. ಯುವಜನತೆ ಶಕ್ತಿಯ ಜ್ವಾಲೆಗಳಾಗಬೇಕು ಎಂದರು.
ಶಿಕ್ಷಣ ತಜ್ಞರಾದ ಕೆ.ಆರ್.ಪದ್ಮಿನಿ ಮಾತನಾಡಿ , ಸ್ವಾಮಿ ವಿವೇಕಾನಂದರು ಪರೀಕ್ಷಿಸದೆ ಯಾವುದನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ಏಕಾಗ್ರತೆ ಎಂಬುದು ಜೀವನದ ಮುಖ್ಯಘಟಕಎಂದರು. ಶಕ್ತಿಯು ನಮ್ಮೊಳಗೆ ಇದೆ ನಾವು ಏನು ಬೇಕಾದರೂ ಸಾಧಿಸಬಹುದು. ಶಕ್ತಿಯ ಗಣಿಗಳಾಗಿ ಒಳ್ಳೆಯ ವಿಚಾರಗಳಿಗೆ ಕಿವಿ ಕೊಡಿ ಆತ್ಮವಿಶ್ವಾಸದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.
ವಿವೇಕವಂಶಿ ಸಂಸ್ಥೆಯ ನಿತ್ಯಾನಂದ ವಿವೇಕವಂಶಿ ಮಾತನಾಡಿ, ದೇಶ ಬದಲಿಸಬೇಕೆಂದರೆ ಮೊದಲು ಮನುಷ್ಯರನ್ನು ಬದಲಾಯಿಸಬೇಕು. ವಿವೇಕಾನಂದ ಅವರನ್ನು ಎಲ್ಲಾ ದೇಶಗಳು ಒಪ್ಪಿಕೊಳ್ಳುತ್ತವೆ. ಆಂತರಿಕವಾಗಿ ಬಲಿಷ್ಠರಾಗಿ ಪ್ರತಿಯೊಂದು ಆತ್ಮವು ಆಂತರ್ಯದಲ್ಲಿ ಜೀವಂತವಾಗಿದೆ. ಅದುಅದಮ್ಯ ಶಕ್ತಿಯಗಡಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿವಿಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವಿವೇಕಾನಂದರು ತಮ್ಮ ಸ್ವಾರ್ಥದ ಬಗ್ಗೆ ಚಿಂತಿಸಿರಲಿಲ್ಲ. ಸದಾದೇಶದ ಶಕ್ತಿಯನ್ನು ಪ್ರೇರೇಪಿಸಿದರು. ನಾವು ನಮ್ಮ ಶಕ್ತಿಯನ್ನು ದೇಶಕ್ಕೆ ಹೇಗೆ ಹಂಚಿಕೆ ಮಾಡಬೇಕು ಎಂದು ತಿಳಿಸಿ ಕೊಟ್ಟವರು ಅವರು. ಅಸಾಧಾರಣ ವಿಚಾರಗಳನ್ನು ಚಿಂತಿಸುವ ವ್ಯಕ್ತಿ ಮಹಾಪುರುಷನಾಗುತ್ತಾನೆ. ಯುವಜನತೆ ಅಂತರಂಗದ ಶಕ್ತಿಯನ್ನು ಹೆಚ್ಚಿಸಿಕೊಂಡು ದೇಶಕಟ್ಟುವ ಕಾರ್ಯದಲ್ಲಿ ತೊಡಗಬೇಕು ಎಂದರು.
ತುಮಕೂರು ವಿವಿಯ ಕುಲಸಚಿವೆ ನಾಹಿದಾಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ ಕರಿಯಣ್ಣ., ವಿವೇಕಾನಂದ ಅಧ್ಯಯನ ಪೀಠ ಸಂಯೋಜಕರಾದ ಡಾ.ಚೇತನ್ ಪ್ರತಾಪ್ ಕೆ.ಎನ್. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx