ಮೈಸೂರು: ಆಸ್ಪತ್ರೆಗೆ ಬರುವಂತಹ ಪ್ರತಿಯೊಬ್ಬ ರೋಗಿಗಳನ್ನು ಅತ್ಯಂತ ಪ್ರೀತಿ, ವಾತ್ಸಲ್ಯ , ವಿಶ್ವಾಸ ಮತ್ತು ಅನ್ಯೋನ್ಯತೆಯಿಂದ ಕಂಡರೆ ಅದಕ್ಕಿಂತ ಉಪಚಾರ ಬೇರೊಂದಿಲ್ಲ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿoಗ್ ಘಟಕ ವತಿಯಿಂದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಗ್ರಂಥಾಲಯ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಶತಮಾನ ಕಂಡ ಮೈಸೂರು ವೈದ್ಯಕೀಯ ಕಾಲೇಜು 9 ಸಾವಿರ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಪಂಚದಾದ್ಯಂತ ಈ ಕಾಲೇಜಿನಲ್ಲಿ ಕಲಿತ ವೈದ್ಯರು ವಿಸ್ತರಿಸಿಕೊಂಡಿದ್ದಾರೆ ಎಂದರು.
ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಹೆಚ್ಚು ಪರಿಣಿತಿ ಮತ್ತು ಅನುಭವ ಇರುತ್ತದೆ ಎನ್ನುವುದು ನನ್ನ ಭಾವನೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಹೆಚ್ಚಿನವರು ಬಡವರು. ಇವರು ವೈದ್ಯರನ್ನು ದೇವರಂತೆ ಕಾಣುತ್ತಾರೆ ಎಂದರು.
ವೈದ್ಯಕೀಯ ಕ್ಷೇತ್ರದ್ದು ಎರಡು ರೀತಿಯ ಜವಾಬ್ದಾರಿ ಇದೆ. ರೋಗ ಬಂದ ನಂತರ ಚಿಕಿತ್ಸೆ ಕೊಡುವುದು ಮತ್ತು ರೋಗ ಬರದಂತೆ ತಡೆಯುವುದೂ ಕೂಡ ವೈದ್ಯಕೀಯ ಕ್ಷೇತ್ರದ ಜವಾಬ್ದಾರಿ ಆಗಿದೆ ಎಂದರು.
ವೈದ್ಯರು ಸಮಾಜದ ಆಸ್ತಿ. ಇನ್ನೂ ಹೆಚ್ಚಿನ ವೈದ್ಯರು ಈ ಕಾಲೇಜಿನಿಂದ ಹೊರಗೆ ಬಂದು ಜನರ ಆಸ್ತಿ ಆಗಲಿ. ಸೇವೆ, ಶುಚಿತ್ವ ಮತ್ತು ಗುಣಮಟ್ಟದಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಮೈಸೂರು ವೈದ್ಯಕೀಯ ಕಾಲೇಜು ಪ್ರಗತಿ ಕಾಣಲಿ ಎಂದು ಹಾರೈಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್. ಸಿ ಮಹದೇವಪ್ಪ ಅವರು ಮಾತನಾಡಿ, ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿ 100 ವರ್ಷಗಳಾಯಿತು. ಜನರಿಕ್ ಮೆಡಿಸನ್ಸ್ ಅಂದರೆ ಎಲ್ಲರಿಗೂ ಒಂದೇ ಎಂಬ ಪರಿಭಾವನೆ ಇತ್ತು, ಆದರೆ ಈಗ ವೈದ್ಯಕೀಯ ಜಗತ್ತಿನಲ್ಲಿ ನಾನಾ ರೀತಿಯ ವಿಭಾಗಗಳಿವೆ. ಅದಕ್ಕೆ ಸೀಮಿತವಾಗಿ ಸ್ಪೆಷಲಿಸ್ಟ್ ಗಳು ವೈದ್ಯಕೀಯ ಕ್ಷೇತ್ರದಲ್ಲಿ ಇದ್ದಾರೆ.
1994ರಲ್ಲಿ ನಾನು ಆರೋಗ್ಯಮಂತ್ರಿಯಾಗಿದ್ದಾಗ ಹಣಕಾಸು ಮಂತ್ರಿ ಆಗಿ ಸಿದ್ದರಾಮಯ್ಯನವರು ಇದ್ದರು. ದೇವೇಗೌಡ್ರು ದೇವೇಗೌಡರು ಸಿಎಂ ಆಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಎಲ್ಲಾ ವೈದ್ಯಕೀಯ ಕ್ಷೇತ್ರಗಳನ್ನು ಒಂದೇ ಕಡೆ ಸೀಮಿತಗೊಳಿಸಬೇಕು, ಒಂದೇ ವಿಶ್ವವಿದ್ಯಾನಿಲಯಕ್ಕೆ ಒಳಪಡಿಸಬೇಕು ಎಂದು ಆ ಸಂದರ್ಭದಲ್ಲಿ ಮಾತನಾಡಿದ್ದೆ. ಆಗ ‘ಫಸ್ಟ್ ಹೆಲ್ತ್ ಯುನಿವರ್ಸಿಟಿ ‘ ಎಂದು ಜಾರಿಗೆ ತರಲಾಯಿತು. ಈಗ ಆ ಕ್ಷೇತ್ರ ತುಂಬಾ ಬೆಳೆದಿದೆ. ಭಾರತವು ಒಂದು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಪ್ರೈಮರಿ ಹೆಲ್ತ್ ಕೇರ್ ಡೆವಲಪ್ಮೆಂಟ್ ಬಗ್ಗೆ ಗಮನಹರಿಸಿ ಹಳ್ಳಿ ಕಡೆಗಳಲ್ಲಿ ವಾಸಿಸುತ್ತಿರುವ ಜನರ ಬಗ್ಗೆ ಆಸಕ್ತಿ ವಹಿಸಿ ಪ್ರೈಮರಿ ಹೆಲ್ತ್ ಕೇರ್ ಸೆಂಟರ್ ಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರ ದೃಷ್ಟಿಯ ಒಂದು ಸಂಕೇತವಾಗಿ ಅನೇಕ ಸಂಸ್ಥೆಗಳು ಶತಮಾನೋತ್ಸವವನ್ನು ಕಂಡಿದೆ. ಮೈಸೂರು ಈಗ ಶೈಕ್ಷಣಿಕವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ 2 ವೈದ್ಯಕೀಯ ಕಾಲೇಜುಗಳನ್ನು ಮುಖ್ಯಮಂತ್ರಿಗಳು ರೂಪಿಸಿದ್ದು, ಇದರ ಜೊತೆಗೆ ವೈದ್ಯಕೀಯ ಕಾಲೇಜಿನಿಂದ 250 ರಿಂದ 300 ವಿದ್ಯಾರ್ಥಿಗಳಿಗೆ ಇನ್ನಷ್ಟು ಅವಕಾಶ ಕಲ್ಪಿಸುವಂಥಾಗಿತು ಎಂದು ಹೇಳಿದರು.
ಚಾಮರಾಜ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಮಾತನಾಡಿ, ಸೂರ್ಯ ಚಂದ್ರ ಇರುವವರೆಗೂ ಈ ಒಂದು ಸಂಸ್ಥೆಯು ಇರಬೇಕು ಎಂಬುದೂ ಮೈಸೂರಿನ ಎಲ್ಲಾ ಜನತೆಯ ಕನಸ್ಸಾಗಿದೆ ಎಂದರು. ಮೈಸೂರು ನಗರಕ್ಕೆ ನಾಲ್ವಡಿ ಕೃಷ್ಣರಾಜರ ನಂತರ ಶಿಕ್ಷಣ ಮತ್ತು ವೈದ್ಯಕಿಯವಾಗಿ ಅತೀ ಹೆಚ್ಚು ಕೊಡುಗೆ ನೀಡಿದವರು ಸಿದ್ದರಾಮಯ್ಯ ನವರು ಎಂದು ಹೇಳಿದರು. OPD ( ಹೊರರೋಗಿಗಳ ವಿಭಾಗ) ದ ನವೀಕರಣಕ್ಕಾಗಿ 75 ಸಾವಿರ ಕೋಟಿ ಅನುದಾನವನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ ಎಂದರು. ಹಾಗೆಯೇ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಕೇವಲ 350 ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ವ್ಯವಸ್ಥೆ ಇದ್ದು, ವಿದ್ಯಾಭ್ಯಾಸಕ್ಕಾಗಿ ಬರುವವರ ಸಂಖ್ಯೆಯೂ ಪ್ರತಿ ವರ್ಷ ಹೆಚ್ಚಾಗುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 3000 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲು ಕಾಮಗಾರಿಯನ್ನು ಶುರುಮಾಡಲಾಗಿದೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವರರಾದ ಶರಣ ಪ್ರಕಾಶ್ ಶಾಸಕರಾದ ಡಾ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ , ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q