ವರದಿ : ಮಂಜುಸ್ವಾಮಿ ಎಂ ಎನ್.
ತುಮಕೂರು: ಜಿಲ್ಲೆಯ ಗುಬ್ಬಿ ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಸುಮಾರು ವರ್ಷಗಳಿಂದ ಗುಡಿಸಲಲ್ಲಿ ವಾಸವಾಗಿರುವ ನಿರಾಶ್ರಿತರ ಬದುಕನ್ನ ಘನ ಸರ್ಕಾರದ ಸಕಲ ಸೇವಾ ಸೌಲಭ್ಯ ನೀಡಿ ಉತ್ತಮ ಬದುಕನ್ನ ರೂಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ವಿಫಲವಾಗಿದೆ ಎಂದು ಹಿರಿಯ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಬ್ಬಿ ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗ ವಾಸವಿರುವ ಸುಮಾರು 42ಕ್ಕೂ ಹೆಚ್ಚು ನಿರ್ಗತಿಕ ಕುಟುಂಬಗಳ ಗೋಳು ಕೇಳೋರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಇಲ್ಲಿನ ಬಡವರ ಬದುಕು ನಿಜಕ್ಕೂ ರೋಚಕದ ಸಂಗತಿಯಾಗಿದೆ ಕೆಲವು ದಿನಗಳ ಹಿಂದೆಯಷ್ಟೇ ಭೀಕರವಾಗಿ ಸುರಿದ ಮಳೆಯ ನೀರಲ್ಲಿ ವಯೋವೃದ್ದೆಯೊಬ್ಬರು ಮುಳುಗಿ ಪ್ರಾಣ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ ಹಾಗೂ ಹಾವಿನ ಕಡಿತದಿಂದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಕಾಣಬಹುದಾಗಿದೆ. ಆದರೂ ಕೂಡ ತುಮಕೂರು ಜಿಲ್ಲಾ ಆಡಳಿತ ಮತ್ತು ಗುಬ್ಬಿ ತಾಲ್ಲೂಕು ಆಡಳಿತ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಹೋರಾಟಗಾರರು ಹರಿಹಾಯ್ದರು.
ಈ ಹಿಂದೆ ಇದ್ದ ಜಿಲ್ಲಾಧಿಕಾರಿಗಳಾದ ಮೋಹನ್, ಗುಬ್ಬಿ ತಹಶೀಲ್ದಾರ್ ಆಗಿದ್ದ ಮಮತಾ ರವರು ಸಾತೇನಹಳ್ಳಿ ಗ್ರಾಮದ ಸರ್ಕಾರಿ ಸರ್ವೇ ನಂಬರ್ ಒಂದರಲ್ಲಿ ನಿರ್ಗತಿಕ ಕುಟುಂಬಗಳಿಗೆ ನಿವೇಶನ ನೀಡುವ ಉದ್ದೇಶದಿಂದ ಭೂಮಿ ಮಂಜೂರು ಮಾಡಿದ್ದರು. ಕೇವಲ 15 ಕುಟುಂಬಗಳಿಗೆ ಮಾತ್ರ ನಿವೇಶನ ಹಕ್ಕುಪತ್ರವನ್ನು ಸಹ ನೀಡಿದ್ದರು. ಆದರೆ ಸಾತೇನಹಳ್ಳಿ ಗ್ರಾಮದಲ್ಲಿ ಮಂಜೂರು ಮಾಡಲಾಗಿದ್ದ ಜಾಗಕ್ಕೆ ಯಾವುದೇ ಮೂಲಭೂತ ಸೌಕರ್ಯ ಇಲ್ಲದೇ ಇರುವುದು ಜಿಲ್ಲಾ ಆಡಳಿತದ ಗಮನಕ್ಕೆ ಇಲ್ಲವಂತೆ..?
ವಿಜೃಂಭಣೆ ಕಾರ್ಯಕ್ರಮಗಳಿಗೆ ಮಾತ್ರ ಒತ್ತು ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್:
ಇದೇ ಸಂದರ್ಭದಲ್ಲಿ ನಿರಾಶ್ರಿತರನ್ನು ಉದ್ದೇಶಿಸಿ ಮಾತನಾಡುವಾಗ ತುಮಕೂರಿನಲ್ಲಿ ಮೊದಲ ಬಾರಿಗೆ ದಸರಾ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ವೈಭವದಿಂದ ನಡೆಸುತ್ತಿದ್ದು, ಅದಕ್ಕೆ ತೋರುತ್ತಿರುವ ಕಾಳಜಿಯನ್ನ ನಿರಾಶ್ರಿತರ ಉದ್ದಾರಕ್ಕೆ ಯಾಕೆ ತೋರುತ್ತಿಲ್ಲ? ಬಡವರ ಅಭಿವೃದ್ಧಿಗೆ ಏಕೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎನ್ನುವುದು ಆಘಾತದ ಸಂಗತಿಯಾಗಿದೆ. ಅಲ್ಲಿನ ಬಡವರ ಬದುಕು ರೂಪಿಸಲು ಜಿಲ್ಲಾಧಿಕಾರಿಗಳು ಯಾಕೆ ಸಭೆ ನಡೆಸಲಿಲ್ಲ ಎಂದು ಹಿರಿಯ ಹೋರಾಟಗಾರ ಪ್ರಶ್ನೆ ಮಾಡಿದ್ದಾರೆ.
ಗುಬ್ಬಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧವೂ ಕಾನೂನು ಕ್ರಮದ ಎಚ್ಚರಿಕೆ:
ನಿರ್ಗತಿಕರ ಮಕ್ಕಳು ವಿದ್ಯಾಭ್ಯಾಸವಿಲ್ಲದೆ ಅವಿದ್ಯಾವಂತರಾಗುತ್ತಿದ್ದಾರೆ ತಕ್ಷಣವೇ ಸ್ಥಳಕ್ಕೆ ಬಿಇಓ ಭೇಟಿ ನೀಡಬೇಕು ಪುಟ್ಟ ಮಕ್ಕಳ ಸರ್ವೇ ನಡೆಸಿ ಸೂಕ್ತ ಶಿಕ್ಷಣ ನೀಡಬೇಕು. ಇಲ್ಲವಾದರೆ ಕಾನೂನು ಹೋರಾಟದ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಬೇಕಾಗುತ್ತದೆ ಎಂದು ಬಿಇಓಗೆ ಎಚ್ಚರಿಕೆ ಸಂದೇಶ ನೀಡಿದರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಬಡ ಜನರಿಗೆ ಸೂಕ್ತ ಭದ್ರತೆ ಆಶ್ರಯಕ್ಕೆ ಸುಸಜ್ಜಿತವಾದ ಜಾಗ ಮೂಲಭೂತ ಸೌಕರ್ಯ ನಿರಾಶ್ರಿತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗುವುದೇ ಎಂದು ಕಾದು ನೋಡಬೇಕಾಗಿದೆ.
ಹಂದಿಜೋಗಿ ಮತ್ತು ಬುಡುಗ ಜನಾಂಗದ 42 ಕುಟುಂಬಗಳ ಸಂಕಷ್ಟ:
ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಹಂದಿಜೋಗಿ ಮತ್ತು ಬುಡುಗ ಜನಾಂಗದ 42 ಕುಟುಂಬಗಳು ಪ್ರತಿದಿನಾ ಮಾನವೀಯ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಲ್ಲಿ ಬಡತನದ ಜೀವನ ನಡೆಸುತ್ತಿವೆ. ಈ ಜನಾಂಗದವರು ಯಾವುದೇ ಪಕ್ಕಾ ಮನೆ, ವಿದ್ಯುತ್, ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೇವೆ, ಮತ್ತು ಶಿಕ್ಷಣದ ಸೌಲಭ್ಯಗಳಿಲ್ಲದೇ ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಹೋರಾಟ ಮಾಡುತ್ತಿದ್ದಾರೆ.
ಈ ಸಮಸ್ಯೆಯನ್ನು ಬಗೆಹರಿಸಲು, ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ತಂಡವು ಸ್ಥಳೀಯ ಅಧಿಕಾರಿಗಳ ಗಮನ ಸೆಳೆಯಲು ಹೋರಾಟ ಕೈಗೊಂಡಿದೆ. ಈ ಕುಟುಂಬಗಳಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.
ಸಾತೇನಹಳ್ಳಿಯಲ್ಲಿರುವ ಈ ಕುಟುಂಬಗಳಿಗೆ ಮಂಜೂರಾದ ಎರಡು ಎಕರೆ ಜಮೀನಿನಲ್ಲೂ ಸರ್ಕಾರ ಯಾವುದೇ ಮೂಲಭೂತ ಸೌಲಭ್ಯ ಒದಗಿಸಲು ವಿಫಲವಾಗಿದೆ. ಹೀಗಾಗಿ ಕಾಳಜಿ ಫೌಂಡೇಶನ್ ಹಾಗೂ ನೈಜ ಹೋರಾಟಗಾರರ ವೇದಿಕೆ ಈ ಪ್ರತಿಭಟನೆ ಕೈಗೊಂಡಿತ್ತು.
ಈ ಹೋರಾಟ ದಲ್ಲಿ ಪ್ರಮುಖರಾದ ಹೆಚ್.ಎಂ. ವೆಂಕಟೇಶ್, ಮಲ್ಲಿಕಾರ್ಜುನ್ ಎಲ್.ಎಸ್., ತಿಪ್ಪೇಸ್ವಾಮಿ ಸಿ.ಪಿ., ಮುದ್ದು ರಂಗಪ್ಪ, ನರಸಿಂಹಮೂರ್ತಿ ಜಿ.ಎನ್., ಹನುಮಂತ ರಾಯಪ್ಪ, ಮತ್ತು ಕಾಳಜಿ ಫೌಂಡೇಶನ್ (ರಿ) ತುಮಕೂರು,ನಟರಾಜ್ ಜಿ ಎಲ್, ರಫೀಕ್, ಶಿವಕುಮಾರ ಮೇಷ್ಟ್ರು ಮನೆ ,ಪದ್ಮನಾಭ, ಗಣೇಶ್ ಮಾರನಹಳ್ಳಿ ,ಸತೀಶ್ ಮುಂತಾದವರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q