ವಿಶೇಷ ವರದಿ : ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ತುಮಕೂರು : ಗುಬ್ಬಿ ತಾಲೂಕಿನಲ್ಲಿ ಕಳೆದ 40 ವರ್ಷಗಳಿಂದಲೂ ಸಹ ಅಲೆಮಾರಿ ಹಂದಿಜೋಗಿ ಸಮುದಾಯದ ಜನರು ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗದ ಗುಡಿಸಲಿನಲ್ಲಿಯೇ ವಾಸವಾಗಿದ್ದರು. ಮಳೆಗಾಲ ಬಂದರೆ ತಗ್ಗು ಪ್ರದರ್ಶನದ ಗುಡಿಸಲಿಗೆ ನೀರು ಬರುತ್ತಿತ್ತು. ಮೂಲಭೂತ ಸೌಕರ್ಯಗಳಿಲ್ಲದೆ ಪ್ರತಿನಿತ್ಯ ತೀವ್ರ ನಿಕೃಷ್ಟ ಸ್ಥಿತಿಯಲ್ಲಿ ಬಿಸಿಲು ಮಳೆ ಎನ್ನದೆ ಜೀವನ ಸಾಗಿಸುತ್ತಿದ್ದರು. ಒಂದೆಡೆ ಪುಟ್ಟ ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲದೆ ಅನಕ್ಷರಸ್ಥರಾಗಿ ಜೀವನ ಸಾಗಿಸುತ್ತಿದ್ದರು ಸಾಂಕ್ರಾಮಿಕ ರೋಗಗಳಿಂದ ಕೆಲವು ಮಂದಿ ಚಿಕಿತ್ಸೆ ಸಿಗದೇ ಪ್ರಾಣ ಬಿಟ್ಟಿದ್ದರು. ಇದನ್ನೆಲ್ಲಾ ಗಮನಿಸಿದ ನೈಜ್ಯ ಹೋರಾಟಗಾರರ ವೇದಿಕೆ ಬೆಂಗಳೂರು ಮತ್ತು ಕಾಳಜಿ ಫೌಂಡೇಶನ್ ತುಮಕೂರು ಈ ಎರಡು ಸಂಘಟನೆಯ ದಿಟ್ಟ ಹೋರಾಟಗಾರರು ಸ್ಥಳ ಪರಿಶೀಲನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಕಲ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿದ್ದರು.
ಕಾಳಜಿ ಫೌಂಡೇಶನ್ ತುಮಕೂರು ಮತ್ತು ನೈಜ್ಯ ಹೋರಾಟಗಾರರ ವೇದಿಕೆಯ ಕಾರ್ಯಕರ್ತರು ಗುಬ್ಬಿ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇ ಓ ಮತ್ತು ಪ.ಪಂ. ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ವಿಚಾರವಾಗಿ ನಮ್ಮ ತುಮಕೂರು ವಾಹಿನಿಯು ಸುದ್ದಿ ಬಿತ್ತರಿಸಲಾಗಿತ್ತು.
ನಂತರ ಎಚ್ಚೆತ್ತ ಅಧಿಕಾರಿಗಳು ಸಾತೇನಹಳ್ಳಿ ಗ್ರಾಮದಲ್ಲಿ ಕಳೆದ ೨೦೧೭-೧೮ ರಲ್ಲಿ ಎರಡು ಎಕರೆ ಜಮೀನನ್ನು ಅಲೆಮಾರಿಗಳ ನಿವೇಶನಕ್ಕೆ ಮೀಸಲಿಟ್ಟ ಜಾಗದ ಸ್ಥಳ ಪರಿಶೀಲನೆ ಮಾಡಿ, ಅಲೆಮಾರಿಗಳಿಗೆ ಮುಖ್ಯವಾಗಿ ಅಗತ್ಯವಿರುವ ಮೂಲಭೂತ ಸೌಕರ್ಯಗಾಳದ ಕುಡಿಯುವ ನೀರು ಮತ್ತು ವಿದ್ಯುತ್ ಇತರೇ ಸೌಕರ್ಯಗಳನ್ನು ವ್ಯವಸ್ಥೆ ಮಾಡಲು ಕಳೆದ ಗುರುವಾರ ತಾ.ಪಂ. ಇಓ ಶಿವಪ್ರಕಾಶ್ ನೇತೃತ್ವದ ತಂಡ ಭೇಟಿ ನೀಡಿತ್ತು ಹಾಗೂ ನಿವೇಶದ ಹಕ್ಕು ಪತ್ರ, ವಸತಿ, ಇನ್ನಿತರೆ ಸೌಕರ್ಯಗಳನ್ನು ನೀಡಲು ಕ್ರಮ ಕೈಗೊಂಡು ಎಲ್ಲವನ್ನೂ ಶೀಘ್ರವೇ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ನಿವೇಶನಕ್ಕೆ ಮೀಸಲಿಟ್ಟ ಜಾಗದಲ್ಲಿಯೇ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅಧಿಕಾರಿಗಳು ಸೂಚನೆ ನೀಡಿದ್ದರು.
ನಂತರ ಕೇವಲ ಎರಡೇ ದಿನಗಳಲ್ಲಿ ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಅತಿ ಹೆಚ್ಚು ಮಳೆ ಆಗುತ್ತಿರುವ ಕಾರಣ ಅಲೆಮಾರಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದೆಂಬ ಸದುದ್ದೇಶದಿಂದ ಪಟ್ಟಣದ ಬಾಬು ಜಗಜೀವನ್ ರಾಮ್ ಭವನಕ್ಕೆ ಜಿಲ್ಲಾಡಳಿತದ ಮಾರ್ಗದರ್ಶನ ಪಡೆದು ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರಾಶ್ರಿತರನ್ನು ಸ್ಥಳಾಂತರಿಸಿದರು.
ಹಂದಿ ಜೋಗರ ಕಾಲೋನಿಗೆ ಉಪ ಲೋಕಾಯುಕ್ತರ ಭೇಟಿ: ಸಂತ್ರಸ್ತರ ಕುಟುಂಬಕ್ಕೆ ವಸತಿ ಕಲ್ಪಿಸುವ ಭರವಸೆ
ಹಂದಿ ಜೋಗರ ಕಾಲೋನಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ. ವೀರಪ್ಪ ಅಲೆಮಾರಿಗಳ ವಾಸ್ತವ ಸ್ಥಿತಿಗತಿಗಳನ್ನು ತಿಳಿಯಲು 42 ಕುಟುಂಬಗಳ ಗುಡಿಸಲಿಗೆ ಭೇಟಿ ನೀಡಿ ನಿರಾಶ್ರಿತರ ಕಷ್ಟ-ಸುಖದ ಬಗ್ಗೆ ಸಮಗ್ರ ಮಾಹಿತಿ ಪಡೆದ ನಂತರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಲ್ಲರಿಗೂ ವಸತಿ ಕಲ್ಪಿಸುವ ಭರವಸೆ ನೀಡಿದರು. ಕೆರೆ ಇರುವ ಜಾಗದಲ್ಲಿ ನಿರಾಶ್ರಿತರು ಇರುವುದು ಸೂಕ್ತವಲ್ಲ ಅವರಿಗೆ ಕೂಡಲೇ ಮೂಲಭೂತ ಸೌಲತ್ತು ನೀಡಿ ಶೀಘ್ರವೇ ವಸತಿಯನ್ನು ನಿರ್ಮಿಸಿ ಸಾತೇನಹಳ್ಳಿಯ ನಿವೇಶನಗಳತ್ತ ಕಳುಹಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಖಡಕ್ ಸೂಚನೆ ನೀಡಿದರು.
ಅಲೆಮಾರಿ ಕುಟುಂಬಗಳಿಗೆ ಮಂಜೂರಾದ ನಾಲ್ಕು ಎಕರೆ ಜಾಗದಲ್ಲಿ 42 ನಿವೇಶನ ಹಂಚಿಕೆ ಆಗಲಿದೆ. ಗುರುತಿಸಲಾದ 65 ಕುಟುಂಬಗಳನ್ನು ಅಲ್ಲಿಗೆ ಶಿಫ್ಟ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. 15 ಮಂದಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದ್ದು ಉಳಿದವರಿಗೂ ಸಹ ಹಕ್ಕುಪತ್ರ ಸಿಗಲಿದೆ. ಹಂತ ಹಂತವಾಗಿ ಎಲ್ಲಾ ಸಂತ್ರಸ್ತ ಕುಟುಂಬಗಳನ್ನು ಸಾತೇನಹಳ್ಳಿಗೆ ಶಿಫ್ಟ್ ಮಾಡಿ ಕೆರೆಯ ಜಾಗವನ್ನು ಕೆರೆಯಾಗಿ ಉಳಿಸಿದರು ಕ್ರಮವಹಿಸಬೇಕಿದ್ದು ತಿಳಿಸಿದರು.
ಅಲೆಮಾರಿಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ತಹಶೀಲ್ದಾರ್ ಗೆ ಸೂಚನೆ:
ಅಲೆಮಾರಿ ಕುಟುಂಬಗಳ ಮಕ್ಕಳು ಯಾರು ಸಹ ಅವಿದ್ಯಾವಂತರಾಗಿ ಉಳಿಯಬಾರದು ಪುಟ್ಟ ಮಕ್ಕಳು ವಿದ್ಯಾವಂತರಾಗಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಜೀವನ ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ಚಿಂತಿಸಿ ಕೂಡಲೇ ಸ್ಥಳೀಯ ವಸತಿ ಶಾಲೆಗೆ ಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಣ ನೀಡಬೇಕೆಂದು ತಹಶೀಲ್ದಾರ್ ರವರಿಗೆ ಸೂಚಿಸಿದರು..
ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜಯಂತ್ ಕುಮಾರ್, ನೂರುನ್ನಿಸಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್, ಲೋಕಾಯುಕ್ತ ಎಸ್ ಪಿ ಲಕ್ಷ್ಮಿ ನಾರಾಯಣ್, ಎ ಸಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಬಿ ಆರತಿ, ತಾ ಪಂ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ವೀಣಾ, ಪ.ಪಂ. ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಹಾಜರಿದ್ದರು.
ಹೆಚ್.ಎಂ.ವೆಂಕಟೇಶ್ ಹೇಳಿದಿಷ್ಟು:
ಗುಬ್ಬಿ ಮಾವಿನಕಟ್ಟೆಕೆರೆ ಸಮೀಪ ಹಂದಿ ಜೋಗಿ, ಬುಗುಡ ಜನಾಂಗದವರು 40 ವರ್ಷಗಳಿಗೂ ಹೆಚ್ಚು ಕಾಲದಿಂದ ಯಾವುದೇ ಮೂಲಭೂತ ಸೌಕರ್ಯಗಳಲ್ಲದೆ ಬದುಕು ಕಟ್ಟಿಕೊಂಡಿದ್ದರು. ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಗುಡಿಸಿಲೊಳಗೆ ನೀರು ತುಂಬಿತು. ಗುಡಿಸಿಲಲ್ಲಿ ಮಲಗಿದ ಅಜ್ಜಿ ಒಬ್ಬಳು ನೀರಿನಲ್ಲಿ ಮಲಗಿ ಪ್ರಾಣಬಿಟ್ಟಳು. ಈ ಘಟನೆಯು ನಮಗೆ ಮನಕುಲುಕುವಂತೆ ಮಾಡಿತು. ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆಯೇ? ಎಂಬ ಪ್ರಶ್ನೆ ನಮ್ಮಲ್ಲೇ ಉದ್ಭವಾಯಿತು.
ಕಾಳಜಿ ಫೌಂಡೇಶನ್ ನೊಂದಿಗೆ ಚರ್ಚೆ ನಡೆಸಿ ಇಲ್ಲಿನ 42 ಕುಟುಂಬಗಳಿಗೆ 8 ವರ್ಷಗಳ ಹಿಂದೆ ಮಂಜೂರಾದ ಜಮೀನಿನಲ್ಲಿ ಮೂಲಭೂತ ಸೌಕರ್ಯ ಕೊಡಬೇಕು ಮತ್ತು ತಕ್ಷಣ ಈ ನರಕ ಯಾತನೆ ಅನುಭವಿಸುತ್ತಿರುವ ಈ ಅನಕ್ಷರಸ್ತ, ಧ್ವನಿ ಇಲ್ಲದವರನ್ನು ಸರ್ಕಾರ ತಾತ್ಕಾಲಿಕ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಬೇಕು. ಸ್ವಾತೇನಹಳ್ಳಿಯಲ್ಲಿ ಮಂಜೂರಾದ ಜಮೀನಿನಲ್ಲಿ ಮೂಲಭೂತ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಲ್ಲಿಗೆ ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ತಾಲೂಕ್ ಆಡಳಿತ ಮುಂದೆ ಮನವಿ ಸಲ್ಲಿಸಲಾಗಿತ್ತು.
ಗುಬ್ಬಿ ತಾಸಿಲ್ದಾರ್ ಮತ್ತು ಪಟ್ಟಣ ಪಂಚಾಯಿತಿ ಚೀಪ್ ಆಫೀಸರ್ ನಮ್ಮ ಮನವಿಗೆ ಸ್ಪಂದಿಸಿ ತಕ್ಷಣ ಅವರನ್ನು ಬಾಬು ಜಗಜೀವನ್ ರಾಮ್ ಭವನಕ್ಕೆ ಸ್ಥಳಾಂತರ ಮಾಡಿ ಸ್ವಾತೇನಹಳ್ಳಿ ಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಪ್ರಾರಂಭ ಮಾಡಿರುವುದು ಶ್ಲಾಘನೀಯ ವಿಷಯವಾಗಿದೆ.
ಏಳೆಂಟು ವರ್ಷಗಳಿಂದ ನೆನೆಗುದಿಗೆ ಬಿದ್ದ ಪ್ರಕರಣವು ನಮ್ಮ ಹೋರಾಟದ ಒಂದೇ ವಾರದಲ್ಲಿ ಕಾರ್ಯರೂಪಕ್ಕೆ ಬರುತ್ತಿರುವುದನ್ನು ನೋಡಿದರೆ. ನಾವು ಸರಿಯಾದ ದಾರಿಯಲ್ಲಿ ಇದ್ದೇವೆ ಎಂಬುದು ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ಪಾಲಿಸದೆ ಇದ್ದಲ್ಲಿ ಹೋರಾಟಗಾರರು ಬೀದಿಗೆ ಇಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ.
–ಹೆಚ್.ಎಂ.ವೆಂಕಟೇಶ್, ಹಿರಿಯ ಸಾಮಾಜಿಕ ಹೋರಾಟಗಾರರು, ನೈಜ್ಯ ಹೋರಾಟಗಾರರ ವೇದಿಕೆ
ಸುಮಾರು 40 ವರ್ಷಗಳಿಂದ ಸೂರಿಲ್ಲದೆ, ಮೂಲಭೂತ ಸೌಕರ್ಯಗಳಿಲ್ಲದೆ, ವಿಷ–ಜಂತುಗಳ ದಾಳಿಯಿಂದ ತತ್ತರಿಸಿ ಹೋಗಿದ್ದ ಅಲೆಮಾರಿಗಳಿಗೆ ಇದೀಗ ಅಧಿಕಾರಿಗಳ ನಿರಂತರ ಪರಿಶ್ರಮದಿಂದ ಹೊಸ ಜೀವನ ಪ್ರಾರಂಭವಾಗುತ್ತಿರುವುದು ಸಂತಸದ ಸುದ್ದಿಯಾಗಿದೆ. ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ತುಮಕೂರು ಸದಾಕಾಲ ನಿರಾಶ್ರಿತರ ಪರ ದಿಟ್ಟ ಧ್ವನಿಯಾಗಿ ಕೆಲಸ ಮಾಡುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕಾನೂನಿನ ಪ್ರಕಾರ ಸಕಲ ಸೌಲಭ್ಯಗಳನ್ನು ಕಲ್ಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಮಾನ್ಯ ಉಪ ಲೋಕಾಯುಕ್ತರು ನೀಡಿರುವ ಭರವಸೆಗಳು ಶೀಘ್ರವೇ ನಿರಾಶ್ರಿತರಿಗೆ ತಲುಪಬೇಕು.
– ನಟರಾಜ್ ಜಿ.ಎಲ್. ಅಧ್ಯಕ್ಷರು, ಕಾಳಜಿ ಫೌಂಡೇಶನ್ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q