ಭಾರೀ ನಿರೀಕ್ಷೆ ಹುಟ್ಟಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟ ಆಗಿದೆ. ಕರ್ನಾಟಕದಲ್ಲಿ ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್ ಅಭೂತಪೂರ್ವ ಸಾಧನೆ ತೋರಿದೆ. ಉತ್ತರದಲ್ಲಿ ಖರ್ಗೆ ಖದರ್ ತೋರಿದ್ದಾರೆ. ಆದ್ರೆ ಕಾಂಗ್ರೆಸ್ ಡಬಲ್ ಡಿಜಿಟ್ ನಿರೀಕ್ಷೆ ಹುಸಿಯಾಗಿದೆ. ಪ್ರಮುಖ ನಾಯಕರು ಹಾಗೂ ಅವರ ಮಕ್ಕಳಿಗೆ ಸೋಲಿನ ಆಘಾತವಾಗಿದೆ.
ಅದರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದ ಕ್ಷೇತ್ರದಲ್ಲಿ ಬೆಳಗಾವಿ ಒಂದು. ಇಲ್ಲಿ ಕಣಕ್ಕಿಳಿದಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದ್ರೆ ಬೆಳಗಾವಿಯ ಮನೆ ಮಗನಿಗೆ ಮತದಾರರು ಕೈ ಕೊಟ್ಟಿದ್ದಾರೆ. ಕ್ಷೇತ್ರಕ್ಕೆ ವಲಸಿಗರಾದ್ರೂ ಅನುಭವಿ ಜಗದೀಶ್ ಶೆಟ್ಟರ್ಗೆ ಮಣೆ ಹಾಕಿದ್ದರು. ಮಗನ ಸೋಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಆಘಾತ ತಂದಿದೆ.
ಮತ್ತೊಂದೆಡೆ ಬಾಗಲಕೋಟೆ ಕ್ಷೇತ್ರದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಈ ಬಾರಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಹೊಸ ಮುಖ ಸಂಯಕ್ತಾ ಪಾಟೀಲ್ ರನ್ನು ಕಣಕ್ಕಿಳಿಸಿತ್ತು. ಬಂಡಾಯದ ಬಿಸಿ ಹಾಗೂ ಇನ್ನಿತರ ಕಾರಣಗಳಿಂದ ಸಂಯುಕ್ತ ಪಾಟೀಲ್ಗೆ ಸೋಲಾಗಿದೆ. ಇತ್ತ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಲೋಕಸಭಾ ಚುನಾವಣೆಯಲ್ಲೂ ಸೋಲಿನ ಕಹಿ ಉಂಡಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರಿಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಈಶ್ವರ್ ಖಂಡ್ರೆ ಅವರು ಬೀದರ್ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಸಾಗರ್ ಖಂಡ್ರೆಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್ ಗೆ ಸ್ವಲ್ಪಮಟ್ಟಿನ ಸಮಾಧಾನ ತಂದಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಕುರ್ಚಿ ಅಲುಗಾಡದಂತೆ ಹಿಡಿದಿದೆ. ಆದರೆ, ಡಿಕೆ ಸುರೇಶ್ ಸೇರಿದಂತೆ ತಮ್ಮ ಹಿಂಬಾಲಕರಲ್ಲೇ ಹಲವರು ಸೋತಿರುವುದರಿಂದ ಡಿಸಿಎಂ ಡಿ.ಕೆ. ಶಿವಕುಮಾರ್ಗಂತೂ ಇದು ನಿರಾಸೆ ತಂದ ಚುನಾವಣೆ ಎಂದರೆ ತಪ್ಪಾಗಲಾರದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


