ಮಧುಗಿರಿ: ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಹಣದ ವಿಚಾರವಾಗಿ ಉಂಟಾದ ಸಣ್ಣ ತಕರಾರು ವಿಕೋಪಕ್ಕೆ ತಿರುಗಿ, ಅಣ್ಣನೇ ತನ್ನ ಸ್ವಂತ ತಮ್ಮನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಪುರವರ ಹೋಬಳಿಯ ನಿಟ್ರಾಹಳ್ಳಿ ಗ್ರಾಮದ ನಾಗಪ್ಪ ಎಂಬುವವರ ಮಕ್ಕಳಾದ ನರಸಿಂಹಮೂರ್ತಿ ಮತ್ತು ಗಂಗರಾಜು (28) ನಡುವೆ ಈ ಘರ್ಷಣೆ ಸಂಭವಿಸಿದೆ. ಮೂಲಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಮನಸ್ತಾಪವಿತ್ತು. ಇಂದು ಅದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.
ಜಗಳದ ಸಂದರ್ಭದಲ್ಲಿ ತೀವ್ರ ಆಕ್ರೋಶಗೊಂಡ ಅಣ್ಣ ನರಸಿಂಹಮೂರ್ತಿ, ಪಕ್ಕದಲ್ಲಿದ್ದ ದೊಡ್ಡ ಕಲ್ಲನ್ನು ಎತ್ತಿ ತಮ್ಮ ಗಂಗರಾಜು ತಲೆಯ ಮೇಲೆ ಹಾಕಿದ್ದಾನೆ. ಕಲ್ಲಿನ ಏಟಿಗೆ ಗಂಗರಾಜು ಅವರ ತಲೆಗೆ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಅಣ್ಣ ನರಸಿಂಹಮೂರ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಒಬ್ಬ ಪ್ರಾಣ ಕಳೆದುಕೊಂಡರೆ, ಇನ್ನೊಬ್ಬ ಜೈಲು ಪಾಲಾದ. ಕ್ಷಣಿಕ ಕೋಪಕ್ಕೆ ಬಲಿಯಾಗದೆ ಅಣ್ಣ–ತಮ್ಮಂದಿರು ಅನ್ನೋನ್ಯವಾಗಿ ಬಾಳಿದ್ದರೆ ಇಂತಹ ದುರಂತ ನಡೆಯುತ್ತಿರಲಿಲ್ಲ” ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


