ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ತುಮಕೂರು ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ವೀರವನಿತೆ ರಾಣಿ ಲಕ್ಷ್ಮೀಭಾಯಿರವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವೀರ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್. ಕೆ. ನಿಧಿ ಕುಮಾರ್, “ದೇಶದ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಅಚಲ ಸಂಕಲ್ಪದಿಂದ ಹೋರಾಡಿದ ರಾಣಿ ಲಕ್ಷ್ಮೀಬಾಯಿ ಅವರು ಮಹಿಳಾ ಶಕ್ತಿಯ ಪ್ರತೀಕವಾಗಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ದತ್ತು ಮಕ್ಕಳಿಗೆ ಸಿಂಹಾಸನದ ಹಕ್ಕಿಲ್ಲ ಎಂಬ ಬ್ರಿಟಿಷರ ನೀತಿಯನ್ನು ಧೈರ್ಯದಿಂದ ದಿಕ್ಕರಿಸಿ, ಮಾತೃಭೂಮಿಯ ಸಾರ್ವಭೌಮತೆಗಾಗಿ ರಣರಂಗದಲ್ಲಿ ವೀರಮರಣವನ್ನಪ್ಪಿದ ಅವರ ಇತಿಹಾಸ ನಮಗೆ ಇಂದಿಗೂ ಪ್ರೇರಣೆ” ಎಂದು ನುಡಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಕಾರ್ಯಾಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ ಮಾತನಾಡಿ, 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ವೀರವನಿತೆ ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನರಾಗಿದ್ದರು ಎಂದು ಸ್ಮರಿಸಿದರು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್ ಮಾತನಾಡಿ, ರಾಣಿ ಲಕ್ಷ್ಮೀಬಾಯಿಯವರ ಬದುಕು ಮಹಿಳಾ ಸಬಲೀಕರಣ, ಸ್ವಾಭಿಮಾನ ಹಾಗೂ ದೇಶಪ್ರೇಮದ ಶಾಶ್ವತ ಸಂಕೇತವಾಗಿದೆ ಎಂದು ತಿಳಿಸಿದರು.
ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ರವಿ ಕುಮಾರ್ ಎನ್., ಜಿಲ್ಲಾ ಕಾರ್ಯದರ್ಶಿ ತ್ಯಾಗರಾಜ್ ಕೆ., ಯುವ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಮಾರ್ಗೋ ವೆಂಕಟೇಶ್ ಹಾಗೂ ಮುಖಂಡರುಗಳಾದ ಹನುಮನರಸಯ್ಯ, ಮಾರ್ಕೆಟ್ ಮಣ್ಣೆಪ್ಪ, ವಿಜಿ, ನರಸಿಂಹ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


