ಸರಗೂರು: ತಾಲೂಕು ಕೇಂದ್ರದ ಪ್ರವಾಸಿ ಮಂದಿರದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿಯ (ದಸಂಸ) ಎಲ್ಲಾ ಬಣಗಳನ್ನು ಒಗ್ಗೂಡಿಸಿ ಹೊಸ ಒಕ್ಕೂಟ ರಚನೆ ಮಾಡುವ ಕುರಿತು ಪೂರ್ವಭಾವಿ ಸಭೆ ಯಶಸ್ವಿಯಾಗಿ ಜರುಗಿತು. ವಿವಿಧ ಇಲಾಖೆಗಳ ಅಧಿಕಾರಿಗಳಿಂದ ದೀನ ದಲಿತರಿಗೆ ಹಾಗೂ ರೈತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಧ್ವನಿ ಎತ್ತಲು ಬೃಹತ್ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು, “ಹಿಂದೆ ಎಚ್.ಡಿ. ಕೋಟೆ ಮತ್ತು ಸರಗೂರು ಒಂದೇ ತಾಲೂಕು ಆಗಿದ್ದಾಗ ಹಲವಾರು ಹೋರಾಟಗಾರರನ್ನು ಹುಟ್ಟುಹಾಕಿದ ಹೆಮ್ಮೆ ದಸಂಸಗಿದೆ. 70ರ ದಶಕದಿಂದಲೂ ಎಲ್ಲಿ ಅನ್ಯಾಯ, ಭ್ರಷ್ಟಾಚಾರ, ಅತ್ಯಾಚಾರ ಹಾಗೂ ದೌರ್ಜನ್ಯಗಳು ನಡೆದವೋ, ಅಲ್ಲೆಲ್ಲಾ ಸಂಘಟನೆಯು ಅನ್ಯಾಯವನ್ನು ಖಂಡಿಸಿ ಹೋರಾಡುತ್ತಾ ಶೋಷಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ. ದಸಂಸ ಕೂಗಿದ ಘೋಷಣೆಗಳು ಕಾನೂನಾಗಿ ಜನಸಾಮಾನ್ಯರಿಗೆ, ನೊಂದವರಿಗೆ ಹಾಗೂ ದೀನದಲಿತರಿಗೆ ನೇರವಾಗಿ ತಲುಪುತ್ತಿದ್ದವು. ಇದರಿಂದಾಗಿ ಅಧಿಕಾರಿ ವರ್ಗದವರು ಭ್ರಷ್ಟಾಚಾರ ಮಾಡಲು ಹೆದರುತ್ತಿದ್ದರು ಮತ್ತು ಸರ್ಕಾರಗಳು ದಸಂಸ ಚಳವಳಿ ಎಂದರೆ ನಡುಗುತ್ತಿದ್ದವು” ಎಂದು ಸ್ಮರಿಸಿದರು.
“ಪ್ರಸ್ತುತ ನಾವು ವಿವಿಧ ಬಣಗಳಾಗಿ ವಿಭಜನೆಗೊಂಡಿರಬಹುದು. ಆದರೆ ಎಲ್ಲರ ಮೂಲ ಉದ್ದೇಶ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸಿಕೊಂಡು ಹೋಗುವುದೇ ಆಗಿದೆ. ಆದ್ದರಿಂದ ನಾವು ಚಿದ್ರವಾಗುವುದು ಬೇಡ. ಸರಗೂರು ತಾಲೂಕಿನಲ್ಲಿ ಎಲ್ಲರೂ ಸೇರಿ ಒಂದು ಬಲಿಷ್ಠ ಒಕ್ಕೂಟವನ್ನು ರಚಿಸೋಣ. ನಮ್ಮ ಹಕ್ಕುಗಳನ್ನು ಚಳವಳಿಯ ಮೂಲಕವೇ ಪಡೆದುಕೊಳ್ಳೋಣ” ಎಂದರು.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಾಡಿನ ದಿಕ್ಸೂಚಿಯಾಗಿದ್ದ ದಲಿತ ಸಂಘರ್ಷ ಸಮಿತಿಯು ಪ್ರಸ್ತುತ ದಿನಗಳಲ್ಲಿ ಮತ್ತೆ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ. ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅಂಬೇಡ್ಕರ್ ಅವರು ಬಯಸಿದ ಪ್ರಜಾಪ್ರಭುತ್ವ ಸಮಾಜವನ್ನು ಕಟ್ಟಬೇಕಿದೆ ಎಂದು ನಾಯಕರು ಕರೆ ನೀಡಿದರು
ಮುಖ್ಯವಾಗಿ ತಾಲೂಕಿನ ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಬರುವ ಸಾರ್ವಜನಿಕರ, ರೈತರ ಕೆಲಸ ಕಾರ್ಯಗಳನ್ನು ಮಾಡಿಕೊಡದೆ ಅಧಿಕಾರಿಗಳು ಜನರನ್ನು ಅಲೆದಾಡಿಸುತ್ತಿದ್ದಾರೆ. ಅದರಲ್ಲೂ ಕಂದಾಯ ಇಲಾಖೆಯಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ಇದರ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತುವುದೇ ಈ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ. ಪ್ರಾಯೋಗಿಕವಾಗಿ ತಾಲೂಕಿನಲ್ಲಿ ಕೆಲವೊಂದು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲಾ ಬಣಗಳನ್ನು ಒಕ್ಕೂಟದಡಿ ತರಲಾಗುವುದು ಎಂದು ಮುಖಂಡರು ತಿಳಿಸಿದರು.
ಸಭೆಯಲ್ಲಿ ದಸಂಸ ಮುಖಂಡರುಗಳಾದ ಮಲ್ಲಿಕಾರ್ಜುನ, ಎಸ್.ಡಿ. ಸಣ್ಣಸ್ವಾಮಿ, ಗೋಪಾಲ್, ಲಂಕೆ ಲಕ್ಷ್ಮಣ್, ಕೂಡಗಿ ಗೋವಿಂದರಾಜು, ಹಾದನೂರು ಚಂದ್ರ, ಅಣ್ಣಯ್ಯಸ್ವಾಮಿ, ಲಂಕೆ ಶ್ರೀನಿವಾಸ, ಹುನಗಹಳ್ಳಿ ಗೋವಿಂದ, ದೇವಲಾಪುರ ಮಹೇಶ್, ಪುಟ್ಟು, ಹಳಿಯೂರು ನಾಗಣ್ಣ, ಕಲೇಶ್, ಹುಚ್ಚಯ್ಯ (ಸೇಟು), ಚಿಕ್ಕಣ್ಣ, ಕಾರಯ್ಯ, ಶಿವಕುಮಾರ್, ರಾಮಣ್ಣ, ಸೋಮೇಶ್, ಚಿನ್ನಯ್ಯ, ಶಿವಮಲ್ಲು, ಹಾಲಯ್ಯ ಸೇರಿದಂತೆ ಮತ್ತಿತರ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


