ಬಳ್ಳಾರಿ: ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಹಾಗೂ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ (ಪಿಎಂ–ವಿಬಿಆರ್ ವೈ) ಕುರಿತ ಬೃಹತ್ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವು ಜೂನ್ 19ರಂದು ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ನಡೆಯಲಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಾರ್ಗದರ್ಶನದಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ಸಂಜೆ 4 ಗಂಟೆಗೆ ತೋರಣಗಲ್ಲು ವಿದ್ಯಾನಗರದಲ್ಲಿರುವ ಜೆಎಸ್‌ಡಬ್ಲ್ಯೂ ಟೌನ್‌ಶಿಪ್‌ನ ‘ಜೆಮ್ಯಾಕ್ಸ್’ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರಧಾನಿಯಿಂದ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ:
ಅದೇ ದಿನ ಸಂಜೆ 5 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ-ವಿಬಿಆರ್‌ವೈ ಯೋಜನೆಯ ಫಲಾನುಭವಿಗಳಿಗೆ ಸುಮಾರು ₹2,400 ಕೋಟಿ ಪ್ರೋತ್ಸಾಹಧನವನ್ನು ನೇರವಾಗಿ ವಿತರಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ತೋರಣಗಲ್ಲಿನಲ್ಲಿ ಆಯೋಜಿಸಲಾಗಿರುವ ವಿಶೇಷ ಸಂಪರ್ಕ ಕಾರ್ಯಕ್ರಮದಲ್ಲಿ ಉದ್ಯೋಗದಾತರು, ಉದ್ಯೋಗಿಗಳು, ಯೋಜನೆಯ ಫಲಾನುಭವಿಗಳು, ವಿವಿಧ ಉದ್ಯಮಗಳ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬಳ್ಳಾರಿ ಪ್ರಾದೇಶಿಕ ಉದ್ಯೋಗಿಗಳ ಭವಿಷ್ಯ ನಿಧಿ ಕಚೇರಿಯ ಆಯುಕ್ತ ಕೆ.ವಿ. ಪ್ರವೀಣ್, ಯೋಜನೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
— ನಮ್ಮ ತುಮಕೂರು ಡಿಜಿಟಲ್ ಸುದ್ದಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


