ತುಮಕೂರು: ತುಮಕೂರು ದಸರಾ ಉತ್ಸವದ ಅಂಗವಾಗಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಅಮರ ಶಿಲ್ಪಿ ಜಕಣಾಚಾರಿ ಬೃಹತ್ ವೇದಿಕೆಯಲ್ಲಿ ಅಕ್ಟೋಬರ್ 11 ಹಾಗೂ 12ರಂದು ಪ್ರತಿ ದಿನ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ದಸರಾ ಉತ್ಸವದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಗೃಹ ಸಚಿವರಿಂದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ :
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಡಾ.ಶಿವಕುಮಾರ ಸ್ವಾಮೀಜಿ ಧಾರ್ಮಿಕ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾಗೌರಿ(ಮಹಾಕಾಳಿ) ಅಲಂಕಾರದಲ್ಲಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ತುಮಕೂರು ದಸರಾ ಪ್ರಯುಕ್ತ ಅಕ್ಟೋಬರ್ 11ರ ಆಯುಧ ಪೂಜೆ ದಿನದಂದು ಏರ್ಪಡಿಸಿರುವ ಮ್ಯಾರಾಥಾನ್, ನಾಡಕುಸ್ತಿ, ಆಹಾರ ಮೇಳ, ವಸ್ತುಪ್ರದರ್ಶನ, ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳನ್ನು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಕ್ರೀಡಾ ದಸರಾ ಉತ್ಸವದಲ್ಲಿ ಅಕ್ಟೋಬರ್ 11ರ ಬೆಳಿಗ್ಗೆ 7 ಗಂಟೆಗೆ ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಮ್ಯಾರಾಥಾನ್ ಓಟ ಏರ್ಪಡಿಸಲಾಗಿದ್ದು, ಕ್ರೀಡಾಪಟುಗಳು, ಅಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ನಾಡಕುಸ್ತಿ; ಆಹಾರ ಮೇಳ; ಪ್ರತಿಷ್ಠಿತ ಹೆಚ್.ಎ.ಎಲ್. ಸಂಸ್ಥೆಯಿಂದ ಹೆಲಿಕಾಪ್ಟರ್ ಶೋ; ಇಸ್ರೋ ಸಂಸ್ಥೆಯಿಂದ ಬಾಹ್ಯಾಕಾಶ ಕುರಿತು ವಿಜ್ಞಾನಿ ರಾಜಾ ರಾಮಣ್ಣ ವಸ್ತುಪ್ರದರ್ಶನ; ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ, ಮತ್ತಿತರ ಇಲಾಖೆಗಳಿಂದ ಅತ್ಯಾಕರ್ಷಕ ವಸ್ತುಪ್ರದರ್ಶನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಸಂಜೆ 7:15 ಗಂಟೆಗೆ ಆಕರ್ಷಕ ಲೇಸರ್ ಶೋ; 7:30 ಗಂಟೆಯಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಗುರುಕಿರಣ್ ಹಾಗೂ ಕಂಬದ ರಂಗಯ್ಯ ಮತ್ತು ತಂಡದವರು ಕನ್ನಡ ಗೀತೆಗಳ ಮೂಲಕ ಜನರನ್ನು ರಂಜಿಸಲಿದ್ದಾರೆ ಎಂದು ತಿಳಿಸಿದರು.
ಅ.12ರ ವಿಜಯದಶಮಿ ಕಾರ್ಯಕ್ರಮಗಳು:
ಮರುದಿನ ಅಕ್ಟೋಬರ್ 12ರ ವಿಜಯದಶಮಿ ದಿನದಂದು ಮಧ್ಯಾಹ್ನ 1 ಗಂಟೆಗೆ ನಗರದ ಟೌನ್ ಹಾಲ್ ವೃತ್ತದಿಂದ ಮೆರವಣಿಗೆ ನಡೆಯಲಿದ್ದು, ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 5 ಗಂಟೆಯಿಂದ ವಿಜಯದಶಮಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶಮೀ ಪೂಜೆ; ಬೆಳಿಗ್ಗೆ 10 ರಿಂದ 1 ಗಂಟೆಯವರಗೆ ನಗರದ ಕನ್ನಡ ಭವನದಲ್ಲಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ.
ನಂತರ ಸಂಜೆ 5:30 ರಿಂದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರಿನ ಶ್ರೀ ಸಾಯಿರಾಮನ್ ನೃತ್ಯ ಕೇಂದ್ರದಿಂದ ನವದುರ್ಗೆಯರ ಇತಿಹಾಸ ಕುರಿತ ನೃತ್ಯ ರೂಪಕ; 6:30 ಗಂಟೆಯಿಂದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ತಂಡದವರಿಂದ ಸಂಗೀತ ರಸಸಂಜೆ ಹಾಗೂ ಡ್ರೋಣ್ ಶೋ; ರಾತ್ರಿ 9:30 ಗಂಟೆಗೆ ಸಮಾರೋಪ ಸಮಾರಂಭ; 10:15 ಗಂಟೆಗೆ ಹಸಿರು ಸಿಡಿಮದ್ದುಗಳಿಂದ ಬಾಣ–ಬಿರುಸು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ರಸದೌತಣವನ್ನು ಸವಿಯಲು ಬನ್ನಿ:
ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 11 ಹಾಗೂ 12ರಂದು ಏರ್ಪಡಿಸಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾಡ ದೇವಿ ಚಾಮುಂಡೇಶ್ವರಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುವುದರೊಂದಿಗೆ ಸಂಜೆಯ ವೈವಿಧ್ಯಮಯ ಸಾಂಸ್ಕೃತಿಕ ಕಾಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ರಸದೌತಣವನ್ನು ಸವಿಯಬೇಕೆಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q