ತುಮಕೂರು ಜಿಲ್ಲಾಡಳಿತದ ವತಿಯಿಂದ ಪ್ರಪ್ರಥಮ ಬಾರಿಗೆ ತುಮಕೂರು ಆಯೋಜಿಸಲಾಗಿದ್ದ ತುಮಕೂರು ದಸರಾ ಉತ್ಸವದಲ್ಲಿ ಧಾರ್ಮಿಕ ಆಚರಣೆಗಳಿಂದ ಅಭೂತಪೂರ್ವ ಯಶಸ್ಸಿಗೆ ಕಾರಣಕರ್ತರಾದ ಜಿಲ್ಲಾ ಅರ್ಚಕರ ಸಂಘಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ದಸರಾ ಉತ್ಸವದ ಪ್ರಯುಕ್ತ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಚಾಮುಂಡೇಶ್ವರಿ ದೇವಿಗೆ ಶರನ್ನವರಾತ್ರಿಯ 9 ದಿನಗಳ ಕಾಲ ವಿವಿಧ ಅಲಂಕಾರ ಪೂಜೆ, ಪುಣ್ಯಾಹ, ಹೋಮ, ಪೂರ್ಣಾಹುತಿ, ಮತ್ತಿತರ ಪೂಜಾ ಸೇವೆಗಳು ಹಾಗೂ ವಿಜಯ ದಶಮಿಯ ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ದಸರಾ ಉತ್ಸವದ ಸಕಲ ಧಾರ್ಮಿಕ ಪೂಜಾ ಸೇವೆಗಳ ನೇತೃತ್ವ ವಹಿಸಿಕೊಂಡಿದ್ದ ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ವಿ. ರಾಮತೀರ್ಥನ್ ಅವರಿಗೂ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ಪ್ರತಿ ದಿನ ಪೂಜಾ ಕೈಂಕರ್ಯಗಳನ್ನು ನಿರ್ವಿಘ್ನವಾಗಿ ನಡೆಸಲು ಸಹಕರಿಸಿದ ದಸರಾ ಧಾರ್ಮಿಕ ಆಚರಣೆ ಸಮಿತಿ ಅಧ್ಯಕ್ಷ ಡಾ: ಎನ್.ತಿಪ್ಪೇಸ್ವಾಮಿ, ಮುಜರಾಯಿ ತಹಶೀಲ್ದಾರ್ ಸವಿತ, ಧಾರ್ಮಿಕ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಪಾಂಚಾರಾತ್ರ ಆಗಮಿಕರು, ಶ್ರೀ ವೀರಶೈವಾಗಮ ಆಗಮಿಕರು, ಶ್ರೀ ಶೈವಾಗಮ ಆಗಮಿಕರು, ಭದ್ರತೆ ವ್ಯವಸ್ಥೆ ಕಲ್ಪಿಸಿದ್ದ ಪೊಲೀಸ್ ಅಧಿಕಾರಿ/ಸಿಬ್ಬಂದಿ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೆ ಅರ್ಚಕರ ಸಂಘದ ಪರವಾಗಿ ರಾಮತೀರ್ಥನ್ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q