ತುಮಕೂರು: ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಇಂದು ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಮತ್ತು ರಾಜ್ಯ ಗೃಹ ಸಚಿವ ಡಾ ಪರಮೇಶ್ವರ್ ಅವರುಗಳು ಗ್ಯಾರಾ ಮೂರ್ತಿಯ ಪ್ರತಿಕೃತಿ ಯನ್ನು ಉದ್ಘಾಟಿಸಿದರು.
ಇದು ಗಾಂಧೀಜಿ ಮುನ್ನಡೆಸುತ್ತಿರೋ ದಂಡಿಯಾತ್ರೆಯ ಪ್ರತಿಕೃತಿಯಾಗಿದೆ. 11 ಮೂರ್ತಿಗಳಲ್ಲಿ ಗಾಂಧೀಜಿ ಸೇರಿದಂತೆ ರೈತ ವರ್ಗ, ಎಲ್ಲಾ ಸಮುದಾಯದವರನ್ನು ಪ್ರತಿಬಿಂಬಿಸುತ್ತಿದೆ.
ಗ್ಯಾರಾ ಮೂರ್ತಿ (ಹನ್ನೊಂದು ಮೂರ್ತಿ) ಎಂಬುದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಚಳುವಳಿಯಾದ ‘ದಂಡಿಯಾತ್ರೆ’ ಅಥವಾ ಉಪ್ಪಿನ ಸತ್ಯಾಗ್ರಹವನ್ನು ಬಿಂಬಿಸುವ ಕಲಾಕೃತಿಯಾಗಿದೆ.
ಮಹಾತ್ಮಗಾಂಧಿಜೀ ರವರು ಮುನ್ನಡೆಯುತ್ತ ಅವರನ್ನು ಸಮಾಜದ ವಿವಿಧ ವರ್ಗ ಸಮುದಾಯ ಹಾಗೂ ಆರ್ಥಿಕ ಹಿನ್ನಲೆಯುಳ್ಳ ಹತ್ತು ಈ ಮಂದಿ ಹಿಂಬಾಲಿಸುತ್ತಿರುವುದನ್ನು ಈ ಕಲಾಕೃತಿಯು ಬಿಂಬಿಸುತ್ತದೆ. ಭಾರತದ ಸ್ವಾತಂತ್ರ್ಯದ 25ನೇ ವರ್ಷದ ನೆನಪಿನಲ್ಲಿ ಮೊದಲ ಬಾರಿಗೆ 1972 ರಲ್ಲಿ ಈ ಕಲಾಕೃತಿಯನ್ನು ನವದೆಹಲಿಯಲ್ಲಿ ಸ್ಥಾಪಿಸಲಾಯಿತು.
ದೇವಿಪ್ರಸಾದ್ ಚೌಧುರಿ ಈ ಕಲಾಕೃತಿಯ ಸೃಷ್ಟಿಕರ್ತ:
ಗ್ಯಾರಾಮೂರ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಮಹಾತ್ಮ ಗಾಂಧಿರವರನ್ನು ಹಿಂದೂ, ಸಿಖ್ ಹಾಗೂ ಮುಸಲ್ಮಾನ ಸಮುದಾಯದ ತಲಾ ಒಬ್ಬರು, ಒಬ್ಬ ಕ್ರಿಶ್ಚಿಯನ್ ಪಾದ್ರಿ, ಒಬ್ಬ ರೈತ/ಶ್ರಮಿಕ ವರ್ಗದ ಮಹಿಳೆ, ಒಬ್ಬ ವ್ಯಾಪಾರಿ, ಒಬ್ಬ ದೈಹಿಕವಾಗಿ ದುರ್ಬಲನಾದ ವ್ಯಕ್ತಿ ಮತ್ತು ಒಬ್ಬ ವೃದ್ಧನನ್ನು ಚಳುವಳಿಯ ಗುಂಪಿಗೆ ಸೇರಿಸಲು ಪ್ರಯತ್ನಿಸುತ್ತಿರುವ ಒಬ್ಬ ಮಹಿಳೆ ಹಾಗೂ ಯುವಕ ಹೀಗೆ ವಿವಿಧ ವರ್ಗಗಳ ಹತ್ತು ಮಂದಿ ಹಿಂಬಾಲಿಸುತ್ತಿರುವುದನ್ನು ಕಾಣಬಹುದು.
ಹೀಗೆ ಜಾತಿ, ಧರ್ಮ, ಭಾಷೆ, ಆರ್ಥಿಕ ಸ್ಥಿತಿ ಹಾಗೂ ಇತರೆ ಎಲ್ಲ ವ್ಯತ್ಯಾಸಗಳಿದ್ದರೂ ಮಹಾತ್ಮ ಗಾಂಧಿರವರ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿರುವುದನ್ನು ಈ ಕಲಾಕೃತಿಯು ಬಿಂಬಿಸುತ್ತದೆ.
ತುಮಕೂರು ಅಮಾನಿಕೆರೆ ಉದ್ಯಾನವನದಲ್ಲಿ ಈ ಗ್ಯಾರಾಮೂರ್ತಿಯ ಕಲಾಕೃತಿಯ ಪ್ರತಿರೂಪವನ್ನು ಸ್ಥಾಪಿಸಲಾಗಿದ್ದು ಆಕೃತಿಯು ಒಟ್ಟು ಉದ್ದ 50 ಅಡಿ ಹಾಗೂ ಸರಾಸರಿ 10 ಅಡಿ ಎತ್ತರವಿದ್ದು Fibre reinforced polymer(FRP) ನಿಂದ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q