ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲು ಮಾವು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ.
ಗುಂಡಮ್ಮ (60) ಮತ್ತು ಭುವನೇಶ್ವರಿ (10) ಮೃತ ದುರ್ದೈವಿಗಳಾಗಿದ್ದಾರೆ. ಗ್ರಾಮದ ಗುಂಡಮ್ಮ ವಾಂತಿಬೇದಿಯಿಂದ ಮಂಗಳವಾರ ಮನೆಯಲ್ಲಿ ಮೃತಪಟ್ಟಿದ್ದರು. ಭಾನುವಾರ ಬಾಲಕಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳು ಖಚಿತಪಡಿಸಿದ್ದಾರೆ.
ರತ್ನಮ್ಮ ಎಂಬ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದು ಚಿಕ್ಕನಾಯಕನಹಳ್ಳಿ ತಾಲೂಕು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕಳುಹಿಸಲಾಗಿದೆ.
ಇನ್ನು ರೇಣುಕಯ್ಯ ನೇತ್ರಾವತಿ ರತ್ನಮ್ಮ ಬಸವರಾಜು ಉಮೇಶ್ ಶ್ರೀಧರ್ ರುದ್ರಮ್ಮ ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು ಚಿಕ್ಕನಾಯಕನಹಳ್ಳಿ ತಾಲೂಕು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ಸಂಬಂಧ ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾಕ್ಟರ್ ಚಂದ್ರಶೇಖರ್ ಅವರು, ಸೋರಲು ಮಾವು ಗ್ರಾಮದಲ್ಲಿ ಕಳೆದ ಎರಡು ದಿನಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಇಬ್ಬರಿಗೆ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಎಂಟು ಮಂದಿಗೆ ವಾಂತಿಭೇದಿಯಿಂದ ಬಳಲುತ್ತಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಗ್ರಾಮಕ್ಕೆ ತಾಲೂಕು ವೈದ್ಯಾಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿ ಪೂರಕವಾದ ಚಿಕಿತ್ಸೆ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಆ ಕುಟುಂಬದ ಗೃಹಕಾರ್ಯಗಳಿಗಿದ್ದ ಏಕೈಕ ಆಧಾರ ದಿವಂಗತ ರಂಗಮ್ಮನೇ ಆಗಿದ್ದರು. ಮೂರು ದಿನಗಳ ಹಿಂದೆ ಅಸುನೀಗಿದ ಭುವನೇಶ್ವರಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಈಕೆಯ ಕುಟುಂಬವೂ ಅದೇ ಟ್ಯಾಂಕ್’ನಿಂದ ನೀರು ಕುಡಿಯುತ್ತಿದ್ದುದಾಗಿ ಅವರ ತಾಯಿ ತಿಳಿಸಿದರು. ಭುವನೇಶ್ವರಿ ತನ್ನ ತಮ್ಮ ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ ಯಶ್ವಂತ್, ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್ ಮತ್ತು ಪಂಚಾಯತ್ ಇಲಾಖೆಯ ಇತರೆ ಅಧಿಕಾರಿಗಳು ಮಂಗಳವಾರ ರಾತ್ರಿ ಭೇಟಿ ಕೊಟ್ಟು ತಡರಾತ್ರಿಯವರೆಗೂ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಕುಡಿಯುವುದಕ್ಕಾಗಿ ಮತ್ತು ಅಡುಗೆ ಮಾಡುವುದಕ್ಕಾಗಿ ಬಳಸುತ್ತಿದ್ದ ನೀರಿನ ಸ್ಯಾಂಪಲ್’ಗಳನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತಿರುವುದಾಗಿ ಡಾ ಯಶ್ವಂತ್ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ ಯಶ್ವಂತ್’ರವರ ಮಾಹಿತಿಪ್ರಕಾರ ಭುವನೇಶ್ವರಿಗೆ ಮೂರ್ಛೆರೋಗದ ಸಮಸ್ಯೆ ಇತ್ತಂತೆ. ಅವರು ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರಂತೆ. ಅದರ ಎಲ್ಲ ವಿವರಗಳನ್ನು ಅವರು ಗ್ರಾಮಸ್ಥರ ಎದುರೇ ಬಿಡಿಸಿ ವಿವರಿಸಿದರು. ಆದರೆ, ಗ್ರಾಮಸ್ಥರು ಅವರ ಮಾತನ್ನು ತಳ್ಳಿಹಾಕಿದರು. ರಂಗಮ್ಮನವರ ಸಾವಿಗೆ ವಯೋಸಹಜ ಕಾಯಿಲೆಗಳ ಅಡ್ಡಪರಿಣಾಮದ ಹಿನ್ನೆಲೆಯ ಆಯಾಮದಿಂದದ ಕೂಡ ಪರಿಶೀಲನೆ ನಡೆಸಲಾಗುತ್ತಿದೆ.
ಊರಿಗೆ, ಜೆಜೆಎಂ ಯೋಜನೆಯಡಿ ಮನೆ ಮನೆ ಗಂಗೆ ಮೂಲಕ ಗ್ರಾಮದ ಮನೆ ಮನೆಗೂ ನೀರು ಕಲ್ಪಿಸುವ ಕಾಮಗಾರಿಯ ಎಡವಟ್ಟುಗಳೇ ಇಷ್ಟೆಲ್ಲಕ್ಕೂ ಕಾರಣ ಎಂದು ಗ್ರಾಮಸ್ಥರು ದೂರುತ್ತಾರೆ. ಜೆಜೆಎಂ ಕಾಮಗಾರಿಯ ಇಂಜಿನಿಯರ್ ಹಾಗೂ ಗುತ್ತಿಗೆದಾರ ಇಬ್ಬರೂ ಇಷ್ಟೆಲ್ಲ ದುರಂತಕ್ಕೆ ಕಾರಣ ಎಂದು ತಹಸೀಲ್ದಾರ್ ಹಾಗೂ ಉಪ-ವಿಭಾಗಾಧಿಕಾರಿಗಳ ಬಳಿ ಗ್ರಾಮಸ್ಥರು ನೇರವಾಗಿ ದೂರಿದರು. ಒಡೆದ ಪೈಪುಗಳು, ಬಾಯ್ತೆರೆದ ಗುಂಡಿಗಳು, ಒಡೆದ ಪೈಪುಗಳಿಂದ ಗ್ರಾಮದ ಗಲ್ಲಿಗಲ್ಲಿಯಲ್ಲೂ ಹರಿಯುತ್ತಿರುವ ನೀರು. ಇದು ಈಗ ಸೋರಲಮಾವು ಗ್ರಾಮದ ಚಿತ್ರಣ. ಸೀಪೇಜ್ ನಿಲ್ಲದ ರಸ್ತೆಗಳು ಹಾಗೂ ಪೈಪ್ ಅಳವಡಿಸಲು ಬಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಹಾಗೇ ಬಿಟ್ಟುಹೋದದ್ದರ ಪರಿಣಾಮ ಗ್ರಾಮದ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕಕ್ಕೆ ಪೈಪುಗಳ ಮೂಲಕ ಹರಿಯುವ ನೀರಿನಲ್ಲಿ ಉದ್ದಕ್ಕೂ ಕಲ್ಮಶ ಮಿಶ್ರಿತಗೊಂಡಿದೆ. ಉದ್ದಕ್ಕೂ ಕಲುಷಿತಗೊಂಡಿರುವ ಆ ನೀರನ್ನು ಸಂಸ್ಕರಣಾ ಘಟಕ ಇನ್ನೆಷ್ಟು ಶುದ್ಧಗೊಳಿಸೀತು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕಕ್ಕೆ ತಹಶೀಲ್ದಾರ್ ಪುರಂದರ್’ರವರು ಭೇಟಿಕೊಟ್ಟು, ಗ್ರಾಮಸ್ಥರು ನಿತ್ಯ ಕುಡಿಯುತ್ತಿರುವ ಆ ನೀರನ್ನು ತಾವೇ ಕುಡಿದು ಪರಿಶೀಲಿಸಿದರು. ನಂತರ, ಈ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿ, ಪರೀಕ್ಷಿಸಿದ ನಂತರ ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q