ತುರುವೇಕೆರೆ: ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ತುರುವೇಕೆರೆ ಶಾಖೆ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ತಾಲ್ಲೂಕು ಕಚೇರಿಯ ಮುಂಭಾಗ ನಡೆಯಿತು.
ಪಟ್ಟಣದ ತಾಲ್ಲೂಕು ಕಚೇರಿಯ ಆವರಣದಲ್ಲಿ ಮುಷ್ಕರವನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ಗೌರವಾಧ್ಯಕ್ಷ ಹೇಮತ್ ಕುಮಾರ್, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿ ಸಮಿತಿ ಸಭಾ ನಿರ್ಣಯದಂತೆ ಹಿಂದೆ ರಾಜ್ಯಾದ್ಯಂತ ಮುಷ್ಕರ ನಡೆಸಿದ ಕಾರಣ, ದಿನಾಂಕ:03—10–2024 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದ್ದರು. ಆದರೆ ಸರ್ಕಾರವು ಈ ವೃಂದದ ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿರುವುದಿಲ್ಲ ಮತ್ತು ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ. ಬದಲಾಗಿ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿರುತ್ತದೆ. ಆದ್ದರಿಂದ ಉಲ್ಲೇಖದ ಸಭೆಯಲ್ಲಿ ಮೇಲ್ದಂಡ ಎಲ್ಲಾ ಕಾರಣಗಳಿಗಾಗಿ ಮುಷ್ಕರದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿಗೆ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿರುತ್ತದೆ ಅದರಂತೆ ಮುಷ್ಕರವನ್ನು ನಡೆಸುತಿದ್ದೇವೆ ಎಂದು ತಿಳಿಸಿದರು.
ನಮ್ಮ ಕಚೇರಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡಿ ವೇತನ ಶ್ರೇಣಿ ನಿಗದಿಪಡಿಸಿ, ಕಳೆದ ನಾಲ್ಕು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಪದೋನ್ನತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಕೆ.ಸಿ.ಎಸ್.ಆರ್. ನಿಯಮ 16ಎ ರ ಉಪಖಂಡ(2)ವನ್ನು ಹಿಂಪಡೆದಿರುವುದರಿಂದ ನೌಕರರ ಜೀವನದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿದೆ ಎಂದು ಅವರು ಹೇಳಿದರು.
ಈ 15ಎ ಉಪಖಂಡ(2)ನ್ನು ಮರುಸ್ಥಾಪಿಸುವಂತೆ ಅಥವಾ ಕಂದಾಯ ಇಲಾಖೆಯಲ್ಲಿ ಇತರೆ ಎಲ್ಲಾ ಇಲಾಖೆಗಳಲ್ಲಿ ಮಾಡಿರುವಂತೆ ವರ್ಗಾವಣೆಯ ಮಾರ್ಗಸೂಚಿಯನ್ನು ರಚಿಸಿ ಎನ್ನುವುದು ಸಂಘದ ಪ್ರಮುಖ ಬೇಡಿಕೆಯಾಗಿದೆ. ಅನುಕಂಪದ ನೇಮಕಾತಿಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಆಗಬೇಕಾಗಿರುತ್ತದೆ ಎಂದು ಅವರು ಹೇಳಿದರು.
ಹಾಲಿ ಇರುವ ಅನುಕಂಪದ ಆಧಾರದ ಮೇಲೆ ನೀಡುವ ಪ್ರ.ದ.ಸ. ಹುದ್ದೆಯ ನೇಮಕಾತಿಯನ್ನು ಯಾವುದೇ ಪದವಿ ವಿದ್ಯಾರ್ಹತೆ ಆಧಾರದ ಮೇಲೆ ನೀಡುವ ಬದಲಾಗಿ, ಪಿ.ಯು.ಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರು ಅಥವಾ ತತ್ಸಮಾನ ಹುದ್ದೆಯ ನೇಮಕಾತಿ ಮಾಡುವಂತೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡುವಂತೆ ಅವರು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳು ಈಡೇರುವವರೆಗೆ ದಿನಾಂಕ:10–02–2025 ರಿಂದ ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಷನ್ ಅನ್ನು ಸ್ಥಗಿತಗೊಳಿಸಿ, ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ನಡೆಸುತ್ತಿದ್ದು, ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಜಗದೀಶ್, ಖಜಾಂಚಿ ಸೌಮ್ಯ, ಅಣ್ಣಪ್ಪ, ಪ್ರದಾನ ಕಾರ್ಯದರ್ಶಿ ಚೇತನ್, ಮಲ್ಲಿಕಾರ್ಜುನ್, ಮಂಜುನಾಥ್, ಭೂತೇಶ್, ರಮೇಶ್, ಸತೀಶ, ದಿಲೀಪ್, ಪ್ರಶಾಂತ್, ಬೀರಪ್ಪ ಮುಂತಾದವರಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4