ತುಮಕೂರು: ಉಪಲೋಕಾಯುಕ್ತರೆದುರೇ ವಿಶೇಷ ಚೇತನ ವೃದ್ದೆಯೊಬ್ಬರು ಭಿಕ್ಷೆ ಬೇಡಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ನಗರದಲ್ಲಿ ನಡೆದಿದೆ. ಇತ್ತೀಚೆಗೆ ತುಮಕೂರು ಜಿಲ್ಲೆ ವೈಭವದ ದಸರಾ ಕಾರ್ಯಕ್ರಮದ ಮೂಲಕ ಇಡೀ ರಾಜ್ಯದ ಗಮನ ಸೆಳೆದಿತ್ತು. ಆದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ನರಕಯಾತನೆ ಅನುಭವಿಸುತ್ತಿರುವ ಜನಸಾಮಾನ್ಯರು ಕನಿಷ್ಠ ಮೂಲಭೂತ ಸೌಕರ್ಯವೂ ಸಿಗದೇ ಒದ್ದಾಡುತ್ತಿರುವುದು ಬೆಳಕಿಗೆ ಬಂದಿದೆ.
ಹಂದಿ ಜೋಗಿ ವಾಸಸ್ಥಳದ ಪರಿಶೀಲನೆಗೆ ತೆರಳಿದ್ದ ಉಪಲೋಕಾಯುಕ್ತ ಬಿ.ವೀರಪ್ಪ ಅವರಿಗೆ ಇಲ್ಲಿನ ಕುಟುಂಬಗಳ ನರಕ ಸದೃಶ ಬದುಕಿನ ದರ್ಶನವಾಗಿದೆ. ಇಲ್ಲಿನ ಜನರು ಮೂಲಭೂತ ಸೌಕರ್ಯವಿಲ್ಲದೇ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ.
ವೃದ್ಧೆ ಭಿಕ್ಷೆ ಕೇಳಿದಾಗ ಮನಕರಗಿ ಉಪಲೋಕಾಯುಕ್ತ ಬಿ.ವಿರಪ್ಪಅವರು ಭಿಕ್ಷೆ ನೀಡಿದ್ದಾರೆ. ಜೊತೆಗೆ ವೃದ್ಧೆಯ ಪೂರ್ವಾಪರ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಹಂದಿಜೋಗಿ ಕುಟುಂಬಗಳು ಮಾಡಿದ್ದ ಮನವಿಯ ಮೇರೆಗೆ ಹಾಗೂ ಮಾಧ್ಯಮ ವರದಿಗಳ ಹಿನ್ನೆಲೆ ಉಪಲೋಕಾಯುಕ್ತ ಬಿ.ವೀರಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಕೂಡಲೇ ಮೂಲಭೂತ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಉಪಲೋಕಾಯುಕ್ತರಿಗೆ ಕಾನೂನು ಸೇವಾಪ್ರಾಧಿಕಾರದ ನ್ಯಾಯಾಧೀಶೆ ನೂರುನ್ನಿಸಾ ಸಾಥ್.
ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ಹಂದಿ ಜೋಗಿ ಸಮುದಾಯ ಮತ್ತು ಬುಡಕಟ್ಟು ಜನಾಂಗದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವಂತೆ ನಿರಂತರವಾಗಿ ಹೋರಾಟ ಮಾಡುತ್ತಿದೆ. ಈ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎನ್ನುವುದು ಈ ಸಂಘಟನೆಗಳ ಹೋರಾಟದ ಆಶಯವಾಗಿದೆ. ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಉತ್ತಮ ಜೀವನ ನಡೆಸಲು ಸರಿಯಾದ ಮೂಲಭೂತ ವ್ಯವಸ್ಥೆಗಳನ್ನ ಕಲ್ಪಿಸಬೇಕು ಎನ್ನುವುದು ಹೋರಾಟಗಾರರ ಮನವಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q