ಪಾವಗಡ: ತಾಲ್ಲೂಕಿನ ಬಂಗಾರನಾಯಕನಬೆಟ್ಟದ ಗ್ರಾಮಸ್ಥರ ನೇತೃತ್ವದಲ್ಲಿ ಭಾನುವಾರ ಒಂದೇ ಸ್ಥಳದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಿ ವಿಶ್ವಕ್ಕೆ ಮಾದರಿಯಾದ ಘಟನೆ ನಡೆದಿದೆ.
ಇಲ್ಲಿಯವರೆಗೂ ಒಂದೇ ಸ್ಥಳದಲ್ಲಿ ಈ ಮಹಾನ್ ಚೇತನಗಳ ಮೂರ್ತಿ ನೆಲೆಗೊಂಡಿರಲಿಲ್ಲ. ಆದರೆ ವಿಶೇಷವಾಗಿ ನಾಯಕ ಸಮುದಾಯವೇ ಇರುವ ಗ್ರಾಮದಲ್ಲಿ ವಾಲ್ಮೀಕಿ ಮಹರ್ಷಿ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಪ್ರತಿಷ್ಠಾಪಿಸಿ ನಾಗರೀಕ ಸಮಾಜದಲ್ಲಿ ಸಮಾನತೆಯನ್ನು ತೋರಿದ್ದಾರೆ.
ಜಾತಿ ಜಾತಿಗಳ ಕೋಮು ಸೃಷ್ಟಿಸುವ ಸಮಾಜದಲ್ಲಿ ಈ ಬಂಗಾರನಾಯಕನಬೆಟ್ಟದ ಗ್ರಾಮಸ್ಥರು ತದ್ವಿರುದ್ದವಾಗಿ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆದಿದ್ದಾರೆ. ವೈಶಿಷ್ಟ್ಯತೆ, ಭ್ರಾತೃತ್ವಭಾವನೆ, ಸಾಮರಸ್ಯ, ನಾವೆಲ್ಲರೂ ಒಂದು ಎಂಬ ವಿಭಿನ್ನಾತ್ಮಕ ಕಾರ್ಯದ ಮೂಲಕ ಸಾರಿ ಹೇಳಿ ಪ್ರೇರಣೆಯೆನಿಸಿದ್ದಾರೆ.
ಈ ಇಬ್ಬರು ಮಹಾನ್ ಪುಣ್ಯ ಪುರುಷರ ಪುತ್ಥಳಿಗಳನ್ನು ಅನಾವರಣಗೊಳಿಸಿದ ನಿಡಗಲ್ ವಾಲ್ಮೀಕಿ ಸಂಸ್ಥಾನದ ಪೀಠಾಧ್ಯಕ್ಷರು ಶ್ರೀ ಸಂಜಯ ಕುಮಾರ ಸ್ವಾಮೀಜಿಯವರು ಆನಂತರ ಮಾತನಾಡಿದರು.
ಏಕಸ್ಥಳದಲ್ಲಿ ರಾಮಾಯಣ ಕತೃ ವಾಲ್ಮೀಕಿ ಮಹರ್ಷಿ, ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಿರುವ ಗ್ರಾಮದ ಜನರು ಪುಣ್ಯವಂತರು. ನಮಗೆ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಈ ಮಹಾತ್ಮರು ಸ್ಪೂರ್ತಿಯಾಗಿದ್ದಾರೆ. ಹಾಗಾಗಿ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಪ್ರೊ. ಡಾ.ಕರಿಯಣ್ಣ (ಕರಿಯ ನಿಷಾದ ) ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ತಳಸಮುದಾಯದ ಹರಿಕಾರರು. ವಾಲ್ಮೀಕಿ ರಾಮಾಯಣ ಜ್ಞಾನದ ಪ್ರತೀಕವಾದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಜ್ಞಾನದ ಜೊತೆಗೆ ಸಮಾಜದಲ್ಲಿನ ನಾಗರೀಕರ ಬದುಕನ್ನು ಹಸನುಗೊಳಿಸಿದ ಮಾಣಿಕ್ಯ ಎಂದು ಬಣ್ಣಿಸಿದರು.
ಬಂಗಾರನಾಯಕನ ಬೆಟ್ಟ ಸ್ವಾತಂತ್ರ್ಯ ಪೂರ್ವದ ಇತಿಹಾಸ ತುಂಬಾ ಕೌತುಕತೆ ಹೊಂದಿದೆ. ಆ ನಿಟ್ಟಿನಲ್ಲಿ ಇಂದು ಅನಾವರಣಗೊಂಡ ಈ ಮಹನೀಯರ ಪುತ್ಥಳಿಗಳು ಇತಿಹಾಸದ ಸಂಕೇತದ ಜತೆಗೆ ಪ್ರೀತಿ, ಸಾಮರಸ್ಯ, ಸಮಾನತೆ, ಸೋದರತೆಯ ಸಂಕೇತವಾಗಿವೆ. ಆ ಹಿನ್ನೆಲೆ ನಾಗರಿಕರು ಸ್ವಯಂ ಪ್ರೇರಣೆಯೊಂದಿಗೆ ಇಂತಹ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಬೇಕು ಎಂದು ಸಹಕರಿಸಿದ ಗ್ರಾಮಸ್ಥರು, ಪಂಚಾಯಿತಿಯವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಗ್ರಾಮದ ಮುಖಂಡ ಮಂಜುನಾಥ್ ಅವರು ಮಾತನಾಡಿ, ಇದೊಂದು ಅಲೋಚನಾ ಕಾರ್ಯ ನಮ್ಮ ಬದುಕಿನಲ್ಲಿ ಮಹತ್ತರವಾದದ್ದು. ಇಂತಹ ಕೆಲಸ ನಾಡಿನ ಉದ್ದಕ್ಕೂ ಆದಾಗ ನಮ್ಮಲ್ಲಿನ ಸಂಕುಚಿತ ಮನೋಭಾವನೆ ಕೊನೆಯಾಗಿ ವಿಶಾಲತೆ ಮೈಗೂಡುತ್ತದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಮಹಿಳೆಯರು ಕುಂಭ ಹೊತ್ತು ಮೆರವಣಿಗೆ ನಡೆಸಿ ಗಮನಸೆಳೆದರು. ಈ ಸಂದರ್ಭದಲ್ಲಿ ವಕೀಲರಾದ ನರಸಿಂಹಪ್ಪ, ನಿವೃತ್ತ ಸೂಪರಿಡೆಂಟ್ ಜೈಲರ್ ತಿಮ್ಮಯ್ಯ, ಗ್ರಾ.ಪಂ. ಸದಸ್ಯರಾದ ಶಿವಣ್ಣ ಎಸ್, ಜಗದೀಶ್ , ಮಾಜಿ ಸದಸ್ಯರ ಗಳಾದ ಕಾವಲಪ್ಪ, ಓಬಯ್ಯ ಜಿ. ಹಾಗೂ ನಾಗರಾಜು, ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q