ಮಧುಗಿರಿ: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಅಡವಿನಾಗೇನಹಳ್ಳಿ ಗ್ರಾಮದ ಸರ್ವೆ ನಂಬರ್ 234 ರಲ್ಲಿ 4 ಎಕರೆ 28 ಗುಂಟೆ ಖಾತೆ ಮಾಡುವುದರ ಬದಲಿಗೆ ಸರ್ಕಾರಿ ಗೋಮಾಳದ ಜಮೀನು ಸೇರಿ 18 ಎಕರೆ 27 ಗುಂಟೆಗೆ ಅಕ್ರಮವಾಗಿ ಖಾತೆ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.
ಕೊಡಿಗೇನಹಳ್ಳಿ ಹೋಬಳಿಯ ಅಡವಿನಾಗೇನಹಳ್ಳಿ ಗ್ರಾಮದ ಸರ್ವೆ ನಂಬರ್ 234 ವಿಸ್ತೀರ್ಣ 18 ಎಕರೆ 27 ಗುಂಟೆ ಜಮೀನು ಮೂಲತಃ ಸರ್ಕಾರಿ ಗೋಮಾಳ ಜಮೀನಾಗಿದೆ. ಇದರ ಪೈಕಿ 4 ಎಕರೆ 28 ಗುಂಟೆ ಜಮೀನನ್ನು ಸಿ. ಶ್ರೀನಿವಾಸ್ ರಂಗಾಚಾರಿ ಎಂಬುವವರು ಬೆಂಗಳೂರು ಜಿಲ್ಲಾಧಿಕಾರಿ ರವರಿಂದ ಮಂಜೂರು ಮಾಡಿಸಿಕೊಂಡಿದ್ದಾರೆ. ಮಂಜೂರಾತಿಯಂತೆ ಎಂ ಆರ್ ನಂಬರ್ 15ಅ/1985-86 ರವರೆಗೆ ವಿಸ್ತೀರ್ಣ 18 ಎಕರೆ 27 ಗುಂಟೆ ಎಂದು ಜಂಟಿಯಾಗಿ ಮುಂದುವರೆದಿದ್ದು, ತದನಂತರ ಎಂ. ಆರ್.ಸಂ:15ಅ/1985/86 ನ್ನು ತಿರುಚಿ ಮಧುಗಿರಿ ತಹಸಿಲ್ದಾರ್ ರವರ ಮುಂದೆ RRT-CR1961/06-07 ರಲ್ಲಿ 4 ಎಕರೆ 28 ಗುಂಟೆ ಬದಲಿಗೆ 18 ಎಕರೆ 27 ಗುಂಟೆ ಸರ್ಕಾರಿ ಗೋಮಾಳದ ಜಮೀನನ್ನ ಸೇರಿ ಪೌತಿ ಖಾತೆ ಮಾಡಿಸಿಕೊಂಡಿರುತ್ತಾರೆ.
ತದನಂತರ ಉಪ ವಿಭಾಗಾಧಿಕಾರಿಯವರಲ್ಲಿ ನಂ: RRT(ಇ)177/07-08 ರಂತೆ ಪ್ರಕರಣ ದಾಖಲಿಸಿ ಸರ್ಕಾರಿ ಗೋಮಾಳ ಜಮೀನು ಸೇರಿ 18 ಎಕರೆ 27 ಗುಂಟೆ ಜಮೀನನ್ನು ಯಾವುದೇ ಮಂಜೂರಾತಿ ದಾಖಲೆಗಳನ್ನು ಪರಿಶೀಲಿಸದೆ ಮತ್ತು ಮಂಜೂರಾತಿದಾರರಿಗೆ ಸುಮಾರು 90 ರಿಂದ 100 ಎಕರೆ ಜಮೀನು ಹೊಂದಿದ್ದರೂ ಕರ್ನಾಟಕ ಭೂಮಂಜೂರಾತಿ ನಿಯಮಗಳು 1969 ರ ನಿಯಮಗಳನ್ನು ಉಲ್ಲಂಘನೆ ಮಾಡಿ ಸಿ.ನರಸಿಂಹಾಚಾರ್ ಎಂಬುವವರ ಹೆಸರಿಗೆ ಖಾತೆ ಮಾಡಲು ಆದೇಶಿಸಿರುತ್ತಾರೆ.
ಮಂಜೂರಿಯಂತೆ 4 ಎಕರೆ 28ಗುಂಟೆ ಜಮೀನನ್ನು ಹೊರತುಪಡಿಸಿ ಉಳಿಕೆ ಜಮೀನನ್ನು ಸರ್ಕಾರಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕು. ಅಡವಿನಾಗೇನಹಳ್ಳಿ ಗ್ರಾಮದಲ್ಲಿ ಸುಮಾರು 200 ಮನೆಗಳು ಇದ್ದು, ಎಲ್ಲಾ ಕುಟುಂಬಗಳು ವ್ಯವಸಾಯ ಮತ್ತು ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು ದನ-ಕರು, ಎಮ್ಮೆ, ಹಸು, ಕುರಿ, ಮೇಕೆ ಮೇಯಿಸಲು ಗ್ರಾಮದ ಸುತ್ತಮುತ್ತಲು ಎಲ್ಲಿಯೂ ಗೋಮಾಳದ ಜಮೀನು ಇಲ್ಲದ ಕಾರಣ ಕಾಯ್ದಿರಿಸಬೇಕು. ನಮ್ಮೂರಿನ ಸರ್ಕಾರಿ ಶಾಲೆಗೆ ಆಟದ ಮೈದಾನ ಇಲ್ಲದ ಕಾರಣ ಪರಿಶೀಲಿಸಿ ಆಟದ ಮೈದಾನಕ್ಕೂ ನೀಡಬೇಕು. ಸ.ನಂ.234ರ 18 ಎಕರೆ 27ಗುಂಟೆ ಜಮೀನನ್ನು ಸುಮಾರು 80 ವರ್ಷಗಳಿಂದ ಗ್ರಾಮಸ್ಥರು ಜಾನುವಾರುಗಳನ್ನು ಮೇಯಿಸಲು ಉಪಯೋಗಿಸುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.
ಅಡವಿನಾಗೇನಹಳ್ಳಿ ಗ್ರಾಮದ ಮುಖಂಡರು ಮಾತನಾಡಿ, ಗಂಗಮ್ಮ ಎಂಬುವವರು ಸದರಿ ಸರ್ಕಾರಿ ಜಮೀನನ್ನು ಕ್ರಯ ಪತ್ರದಂತೆ ಖಾತೆ ಮಾಡಿಸಿಕೊಂಡಿದ್ದಾರೆ. ಅವರು ಸದರಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸ್ವಚ್ಛಗೊಳಿಸುವಾಗ ಊರಿನ ಮುಖಂಡರಾದ ನಾವುಗಳು ದಾಖಲೆ ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿರುತ್ತದೆ. ಈ ವಿಷಯವಾಗಿ ತಹಸಿಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳು ರವರಲ್ಲಿ ದೂರು ಕೊಟ್ಟರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈಗ ಗಂಗಮ್ಮ ರವರು ಸದರಿ ಜಮೀನನ್ನು ಮತ್ತೊಬ್ಬರಿಗೆ ಪರಭಾರೆ ಮಾಡುವುದರೊಳಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಜಮೀನನ್ನು ಗ್ರಾಮಸ್ಥರಿಗೆ ಉಳಿಸಿಕೊಡಿ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


