ತುರುವೇಕೆರೆ: ಪಟ್ಟಣದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ತುಳ್ಳು ಗಾಡಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿ ಬಾಣಸಂದ್ರ ರಸ್ತೆಯಲ್ಲಿರುವ ಸಂತೆ ಮೈದಾನಕ್ಕೆ ಸ್ಥಳಾಂತರಿಸುವ ಪಟ್ಟಣ ಪಂಚಾಯಿತಿಯ ನಿರ್ಧಾರದ ವಿರುದ್ಧ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ,. ಸಿ ಐ ಟಿ ಯು ನ ತಾಲೂಕು ಕಾರ್ಯದರ್ಶಿ ಸತೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನೂರಾರು ಬೀದಿ ಬದಿ ವ್ಯಾಪಾರಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರಿಸಿ ಮೌನ ಪ್ರತಿಭಟನೆ ಮೂಲಕ ತುರುವೇಕೆರೆ ತಾಲೂಕು ಕಾರ್ಯನಿರ್ವ ಹಣಾಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿಗಳಿಗೆ , ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಿಗೆ, ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿ ಐ ಟಿ ಯು ಸತೀಶ್, ಬೀದಿ ಬದಿ ವ್ಯಾಪಾರಿ ಗಳನ್ನು ಸ್ಥಳಾಂತರ ಮಾಡುತ್ತಿರುವ ಜಾಗದಲ್ಲಿ ಸರಿಯಾದ ಸೌಕರ್ಯಗಳನ್ನು ಮಾಡಿಕೊಡಿ, ಸಂಪೂರ್ಣವಾಗಿ ತಾರತಮ್ಯವಿಲ್ಲದಂತೆ ಎಲ್ಲಾ ತರಹದ ಬೀದಿ ಬದಿಯ ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ನಾವು ಈಗ ವ್ಯಾಪಾರ ಮಾಡಿಕೊಂಡು ಬದುಕುತ್ತಿರುವ ಜಾಗವನ್ನು ಖಾಲಿ ಮಾಡುವುದಿಲ್ಲ ಎಂದರು.
ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಮಾರುತಿ ಟಿ.ಎನ್. ಮಾತನಾಡಿ, ನಮ್ಮ ಗಮನಕ್ಕೆ ತಾರದೆ ಪಟ್ಟಣ ಪಂಚಾಯ್ತಿಯಲ್ಲಿ ಒಂದು ಬೀದಿಬದಿ ವ್ಯಾಪಾರಿಗಳ ಸಮಿತಿಯನ್ನು ಮಾಡಿಕೊಂಡಿದ್ದಾರೆ.ಈ ಸಮಿತಿಗಳಲ್ಲಿ ಇರುವವರು ವ್ಯಾಪಾರಿಗಳಲ್ಲ ನೆಪ ಮಾತ್ರಕ್ಕೆ ಅವರು ಯಾರನ್ನು ಬೇಕು ಅವರನ್ನು ಸೇರಿಸಿಕೊಂಡು ಸಮಿತಿ ರಚನೆ ಮಾಡಿಕೊಂಡಿದ್ದಾರೆ. ಇದುವರೆಗೂ ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ಅನುಕೂಲಗಳನ್ನು ಮಾಡಿರುವುದಿಲ್ಲ. ನಮ್ಮನ್ನು ಸ್ಥಳಾಂತರಿಸಲು ಗುರುತಿಸಿರುವ ಜಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಇಲ್ಲವಾದಲ್ಲಿ ಸುಮ್ಮನೇ ಇರಿ. ನಾವು ಈಗ ಹಮ್ಮಿಕೊಂಡಿರುವ ಪ್ರತಿಭಟನೆ ಕೇವಲ ಸಾಂಕೇತಿಕ ಅಷ್ಟೇ., ನಮ್ಮನ್ನು ಬೀದಿಗೆ ಬೀಳುವ ಹಾಗೆ ಮಾಡಿದರೆ, ಉಗ್ರ ಹೋರಾಟವನ್ನು ಮಾಡಲು ನಮ್ಮ ಬೀದಿಬದಿ ವ್ಯಾಪಾರಿಗಳ ಸಂಘ ತಯಾರಿದೆ ಎಂದರು.
ಈ ಪ್ರತಿಭಟನೆಯಲ್ಲಿ ವೆಂಕಟೇಶ್, ರಮೇಶ್, ಉಮೇಶ್, ಚಿದಾನಂದ, ಬಾಳೇಕಾಯಿ ಶೇಖರ್, ಪುಷ್ಪ, ಗಂಗಮ್ಮ, ಶಾಂತಮ್ಮ, ಲಕ್ಷ್ಮಮ್ಮ ,ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಅಧ್ಯಕ್ಷ ವೆಂಕಟೇಶ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗಂಗಣ್ಣ, ಧನಂಜಯ್, ಬೀದಿಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz