ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಹುಭಾಷಾ ನಟ ಕಿಶೋರ್ ಆಗಾಗ ವಾಗ್ದಾಳಿ ನಡೆಸುತ್ತಲೆ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಮೋದಿ ಬಗ್ಗೆ ಹರಿಹಾಯುವ ನಟ ಇದೀಗ ಮತ್ತೆ ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮ ಗಾಂಧಿಬಗ್ಗೆ ಮಾತನಾಡುತ್ತಾ ಗಾಂಧಿ ಕುರಿತಾಗಿ 1982ರಲ್ಲಿ ಸಿನಿಮಾ ಬಂದ ನಂತರವೇ ಅವರ ಬಗ್ಗೆ ವಿಶ್ವದ ಇಂಚಿಂಚಿಗೂ ತಿಳಿಯಿತು ಎಂದು ಹೇಳಿದ್ದರು. ಅವರ ಈ ಕಾಮೆಂಟ್‌ಅನ್ನು ವಿರೋಧ ಪಕ್ಷಗಳು ಬಲವಾಗಿ ಟೀಕೆ ಮಾಡುತ್ತಿವೆ.
ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತಾಗಿ ಪ್ರಧಾನಿ ಮೋದಿ ಸಾಕಷ್ಟು ಟ್ರೋಲ್ ಗೂ ತುತ್ತಾಗಿದ್ದಾರೆ. ಇದರ ನಡುವೆ ನಟ ಕಿಶೋರ್ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಿರುವ ಮಾತನ್ನು ಟೀಕೆ ಮಾಡಿದ್ದು, ಕೆಲಸ ಮಾಡಲಾಗದ ಅಯೋಗ್ಯ ಮೋದಿಗೇನು ಹುಚ್ಚೇ ಎಂದು ಪ್ರಶ್ನೆ ಮಾಡಿದ್ದಾರೆ. ‘ಇದೇನು ಹುಚ್ಚೋ … ಹೊಲಸು ಕುತಂತ್ರವೋ?.. ತನ್ನ ಬೌದ್ಧಿಕ ದಿವಾಳಿತನ ಮತ್ತು ಕೆಲಸ ಮಾಡಲಾಗದ ಅಯೋಗ್ಯತೆಯನ್ನು, ನಿರುದ್ಯೋಗ, ಬೆಲೆಯೇರಿಕೆ, ಬಡತನ, ಮಣಿಪುರ, ಚೀನಾ, ಅಗ್ನಿವೀರ್, ರೈತ ಹೋರಾಟ, ನಗದು ಅಮಾನ್ಯೀಕರಣ, ಕೊರೋನ, ಅದಾನಿ, ಪಿಎಮ್ ಕೇರ್ಸ್, ಚುನಾವಣಾ ಬಾಂಡ್ ಹೀಗೆ ಹಲವು ನೈಜ ಸಮಸ್ಯೆ ಸೋಲುಗಳನ್ನೂ ಮುಚ್ಚಿಹಾಕಲು ಬಾಯಿಗೆ ಬಂದದ್ದು ಬೊಗಳುತ್ತಾ ಪ್ರತಿದಿನವೂ ಕಾನೂನು ಬಾಹಿರ ಪ್ರಚಾರವನ್ನೂ, ಗಮನ ಬೇರೆಡೆ ತಿರುಗಿಸುವ ಈ ಕಳ್ಳ ಕೆಲಸವನ್ನೂ ಮಾಡುತ್ತಾ, ಈ ವಿಕಸಿತ ಮಹಾಮಾನವ ಪರೀಕ್ಷಿಸುತ್ತಿರುವುದು ನಮ್ಮ ಬುದ್ಧಿಮತ್ತೆಯನ್ನ. ಈ ಮಾತುಗಳಿಂದ ಭ್ರಮಿತರಾಗಿ ಬರೀ ಈ ತಲೆಬುಡವಿಲ್ಲದ ಮಾತುಗಳ ಬಗ್ಗೆಯೇ ಗಮನವಿಡುತ್ತೇವೆಯೋ ಇಲ್ಲಾ ಮೂಲಭೂತ ಸಮಸ್ಯೆಗಳನ್ನು ಮರೆಯದೇ ಓಟು ಹಾಕುತ್ತೇವೆಯೋ ನಮ್ಮ ಬುದ್ಧಿವಂತಿಕೆಗೆ ಬಿಟ್ಟದ್ದು.
ನಾವು ಮೂರ್ಖರಾದೆವೋ ಇಲ್ಲವೋ ತಿಳಿಯಲು ಜೂನ್ 4 ರ ವರೆಗೆ ಕಾದು ನೋಡಬೇಕಿದೆ’ ಎಂದು ಕಿಶೋರ್ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ‘ಫೇಕು ಮೋದಿ. ಸ್ಕೂಲ್ ಗೆ ಹೋಗುವ ಸಂದರ್ಭದಲ್ಲಿ ಇಲ್ಲದ ರೈಲ್ವೆ ಸ್ಟೇಷನ್ ನಲ್ಲಿ ಟೀ ಮಾಡಿ ಅದನ್ನು ಮಾರಾಟ ಮಾಡಿದ್ದೇನೆ ಎಂದು ಬೋಗಸ್ ಭಾಷಣ ಬಿಗಿದಿದ್ದರ ಪರಿಣಾಮ ಇದು..’ ಎಂದು ಕಿಶೋರ್ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ. ‘ನಾಲ್ಕು ದಿನಗಳ ಹಿಂದೆ ಪ್ರಧಾನಿ ಮೋದಿ ಅವರ ಇನ್ನೊಂದು ಕಾಮೆಂಟ್ ಗೂ ಅವರು ಟೀಕೆ ಮಾಡಿ ಕಿಶೋರ್ ಪೋಸ್ಟ್ ಮಾಡಿದ್ದಾರೆ. ‘ಎಚ್ಚರ !!!
ಹಿಂದೂ ಧರ್ಮಕ್ಕೆ ನಿಜವಾದ ಆಪತ್ತು ಯಾರೆಂದು ಈಗ ಬಯಲಾಗಿದೆ. ಹಿಂದೂ ಧರ್ಮದ ಮುಸುಕಲ್ಲಿ ರಾಜಕೀಯ ಮಾಡುತ್ತಿದ್ದ ಮೋದಿ, ಸರ್ವಾಧಿಕಾರಿ ಮಹಾರಾಜನ ಪದವಿಯನ್ನೂ ಮೀರಿ ತನ್ನನ್ನು ತಾನು ದೇವರ ದೇವನೆಂದು ಘೋಷಿಸಿಕೊಂಡ ನಂತರ.. ಹಾಗಾಗಿ ಹಿಂದೂಗಳು ಭಯ ಪಡಬೇಕಿರುವುದು ಮುಸಲ್ಮಾನರ ಬಗ್ಗೆಯಲ್ಲ. ಸದಾ ಸುಳ್ಳು ಬೊಗಳುವ ದ್ವೇಷ ಕಾರುವ ಈ ವಿಕಸಿತ ಭಾರತದ ಪರಮಭ್ರಷ್ಟ ‘ವಿಕಸಿತ ದೇವ’- ‘ಮೋದೇವ’ನ ಬಗ್ಗೆ. 300 ವರ್ಷ ಮೊಘಲರ ಆಳ್ವಿಕೆಯಲ್ಲೂ ಮುಸಲ್ಮಾನರು ಮಾಡದ ಕೆಲಸ ಇಂದು ಮೋದಿಯಿಂದ ನಡೆದಿದೆ. ಇನ್ನೂ ಯಾಮಾರಿ ಅಧಿಕಾರ ಕೊಟ್ಟರೆ ದೇಶವಷ್ಟೇ ಅಲ್ಲ ಧರ್ಮವೂ ಖಲಾಸ್ ‘ಎಂದು ಕಿಶೋರ್ ಬರೆದುಕೊಂಡಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


