ಪಾವಗಡ : ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ ನಡೆದ ಹೃದಯ ವಿದ್ರಾವಕ ಘಟನೆಯಿಂದ ಎಚ್ಚೆತ್ತುಕೊಂಡ ವೈದ್ಯಕೀಯ ಇಲಾಖೆ ಅಧಿಕಾರಿಗಳು ಗುರುವಾರದಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿದರು.
ಬುಧವಾರದಂದು ಚಿಕಿತ್ಸೆಗಾಗಿ ಬಂದಿದ್ದ ದಳವಾಯಿಹಳ್ಳಿ ಗ್ರಾಮದ ಹೊನ್ನೂರಪ್ಪ ಎಂಬ ವ್ಯಕ್ತಿ ಮೃತರಾಗಿದ್ದರು. ಆತನ ಮೃತದೇಹವನ್ನು ಸಾಗಿಸಲು ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಇಲ್ಲದ್ದಿದ್ದರಿಂದ ಮಕ್ಕಳು ಗೋಪಾಲಪ್ಪ ಮತ್ತು ಚಂದ್ರಣ್ನ ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ಕರೆದೊಯ್ದಿದ್ದರು. ಈ ಘಟನೆಯನ್ನು “ನಮ್ಮ ತುಮಕೂರು” ವರದಿ ಮಾಡಿದ್ದು, ವರದಿಯ ಬೆನ್ನಲ್ಲೇ ರಾಜ್ಯಾದ್ಯಂತ ಇದು ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಘಟನೆಗೆ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಂಡಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತಾಲ್ಲೂಕು ಕೇಂದ್ರದಲ್ಲಿದ್ದ ಆ್ಯಂಬುಲೆನ್ಸ್ ಗಳ ಪೈಕಿ ಒಂದನ್ನು ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಿದ್ದಾರೆ.
ಈ ಹಿಂದೆ ಇದ್ದ ಆಂಬುಲೆನ್ಸ್ ವಾಹನ ಹಳೆಯದಾಗಿತ್ತು. ಡ್ರೈವರ್ ಸಮಸ್ಯೆ ಇದ್ದಿತು. ಈ ಕಾರಣದಿಂದ 2019 ರಿಂದ ಇಲ್ಲಿನ ರೋಗಿಗಳಿಗೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿತ್ತು. ಅಗತ್ಯವಿದ್ದಾಗ 108 ಸೇವೆಗೆ ಕರೆ ಮಾಡಿ ಆ ವಾಹನ ಬಂದಾಗ ತುರ್ತು ಸೇವೆಗಳನ್ನು ಪಡೆಯಲಾಗುತ್ತಿತ್ತು.
ಕೆಲವೊಮ್ಮೆ 108 ವಾಹನ ಬರುವುದು ತಡವಾಗಿ ಹಲವು ಅವಗಡ ಮತ್ತು ತೊಂದರೆಗಳಾಗುತ್ತಿದ್ದವು. ಆದಾಗಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸರ್ಕಾರಿ ಆಂಬುಲೆನ್ಸ್ ಸೇವೆಗಾಗಿ ಸಂಬಂಧಿಸಿದ ಇಲಾಖೆಯನ್ನು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಪ್ರಸ್ತುತ ಘಟನೆಯಿಂದ ಸರ್ಕಾರಿ ಆಂಬುಲೆನ್ಸ್ ಸೇವೆ ಪ್ರಾರಂಭವಾಗಿದೆ. ಅದು ನಿರಂತರವಾಗಿ ರೋಗಿಗಳಿಗೆ ದೊರೆಯಬೇಕು ಎಂದು ಜನತೆ ಕೋರಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296