ಪಾವಗಡ: ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ಹೊರವಲಯದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಲಾದ ಐಪಿಎಲ್ ಮಾದರಿಯ ಎರಡನೇ ಆವೃತ್ತಿಯ ತೊಗಟವೀರ ಪ್ರೀಮಿಯರ್ ಲೀಗ್ (TPL) ಟೂರ್ನಮೆಂಟ್ ಗೆ ಭಾನುವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಉಮೇಶ್ ಟಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ರಘು ಟೇಪ್ ಕಟ್ ಮಾಡುವ ಮೂಲಕ ಲೀಗ್ ಗಾಗಿ ಚಾಲನೆ ನೀಡಿದರು.
ಟೂರ್ನಮೆಂಟ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಮೇಶ್ ಟಿ, “ನಗರಗಳಿಗೆ ಸ್ಥಳಾಂತರಗೊಂಡಿರುವ ನಮ್ಮ ಯುವಕರು ಹಬ್ಬ–ಹರಿದಿನಗಳಲ್ಲಿ ತಮ್ಮ ಊರಿಗೆ ಬಂದು ಹತ್ತಿರದವರೊಂದಿಗೆ ಸಂತಸವಾಗಿ ದಿನವನ್ನು ಆಚರಿಸಬೇಕೆಂದು ಈ ಟೂರ್ನಮೆಂಟ್ ಆಯೋಜಿಸಲಾಗಿದೆ. ಕ್ರೀಡಾ ಚಟುವಟಿಕೆಗಳು ಯುವಕರಲ್ಲಿ ಆಧ್ಯಾತ್ಮ, ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೌಲ್ಯಗಳನ್ನು ಈ ಟೂರ್ನಮೆಂಟ್ ಗಳಲ್ಲಿ ಕಲಿಯಬಹುದು,” ಎಂದು ಹೇಳಿದರು. ಗ್ರಾಮದಲ್ಲಿ ಈ ರೀತಿಯ ಇನ್ನಷ್ಟು ಕ್ರೀಡಾ ಚಟುವಟಿಕೆಗಳಿಗೆ ತಮ್ಮ ಬೆಂಬಲ ಮತ್ತು ಸಹಕಾರವನ್ನು ನೀಡಲು ಅವರು ಭರವಸೆ ನೀಡಿದರು.
ಐಪಿಎಲ್ ಮಾದರಿಯ ಟೂರ್ನಮೆಂಟ್ :
ಒಟ್ಟು 8 ತಂಡಗಳು ಭಾಗವಹಿಸಿದ ಈ ಟೂರ್ನಮೆಂಟ್‌ಗಾಗಿ ಪ್ರಥಮ ಬಹುಮಾನವಾಗಿ ₹60,000 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ ₹40,000 ನಗದು ಮತ್ತು ಟ್ರೋಫಿ ಘೋಷಿಸಲಾಗಿದೆ. ಕ್ರೀಡಾಪಟುಗಳ ಮತ್ತು ಪ್ರೇಕ್ಷಕರ ಉತ್ಸಾಹದಿಂದ ಪ್ರಥಮ ದಿನದ ಪಂದ್ಯಗಳು ವಿಶೇಷಾಕರ್ಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರೋಮಾಂಚಕ ಪಂದ್ಯಗಳು ಕಾದಿವೆ.
ಈ ಕ್ರೀಡಾ ಹಬ್ಬವು ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಪಟುಗಳ ಬೆಳವಣಿಗೆಗೆ ದೊಡ್ಡ ವೇದಿಕೆಯಾಗಿದ್ದು, ಸಂತೋಷದ ಹಬ್ಬ ಸಂಕ್ರಾಂತಿಗೆ ಹೊಸ ಅರ್ಥವನ್ನು ನೀಡುತ್ತಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx