ರಚನೆ: ವೇಣುಗೋಪಾಲ್
ಹಿಂದಿನ ಸ್ಪರ್ಧೆಯಲ್ಲಿ ಮುಖಭಂಗವಾಗಿದ್ದ ಮೊಲಕ್ಕೆ ಕಿಚ್ಚು ತನ್ನ ಮನದಲ್ಲಿ ಇನ್ನೂ ಆರಿರಲಿಲ್ಲ, ರಾತ್ರಿ ನಿದ್ರೆ ಬಾರುತ್ತಿರಲಿಲ್ಲ, ಇಡೀ ಜಗತ್ತೇ ಆಮೆಯ ಓಟವನ್ನು ಶ್ಲಾಘಿಸಿ ನನ್ನ ನನ್ನ ಬೇಜವಾಬ್ದಾರಿ ಮತ್ತು ಅತಿ ಆತ್ಮ ವಿಶ್ವಾಸವನ್ನು ವಿಡಂಬಿಸಿ ತೆಗಳಿತ್ತು. ಇನ್ನು ಇವನ್ನೆಲ್ಲಾ ನನ್ನಿಂದ ನೋಡಿ ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಈಗ ಹೋಗಿ ಆಮೆಯನ್ನು ಮತ್ತೊಮ್ಮೆ ನನ್ನ ಜೊತೆ ಓಟದ ಸ್ಪರ್ಧೆಗೆ ಕರೆಯುತ್ತೇನೆ, ಬರಲಿಲ್ಲವೆಂದರೆ ಅದರ ಮಾನ ಮರ್ಯಾದೆಗಳನ್ನು ಜಗದ ಮುಂದೆ ಇವ ಅಸಮರ್ಥನೆಂದು ತೆಗಳುತ್ತೇನೆ, ಒಂದು ವೇಳೆ ಬಂದರೆ ಒಂದೇ ಬಾರಿ ಓಡಿ ಆಮೆಯನ್ನು ಸೋಲಿಸುತ್ತೇನೆ. ನಾನು ಇನ್ನು ಸೋಲಬಾರದೂ ಗೆಲ್ಲಲೇಬೇಕು ಎಂದೆಲ್ಲಾ ಯೋಚಿಸಿಕೊಂಡು ಕಾಡಿನ ಒಂದು ಪೊದೆಯಿಂದ ಆಚೆ ಬಂದು ಒಂದು ಎತ್ತರದ ಕಲ್ಲು ಬಂಡೆಯ ಮೇಲೆ ನಿಂತು ಜೋರಾಗಿ ಕೂಗಿ ಹೇಳಿತು.
ಹೇ ವನ ವಾನನರರೇ ಇಲ್ಲಿ ಕೇಳಿ.., ಎನ್ನುತ್ತಲೇ ಎಲ್ಲ ಪ್ರಾಣಿಗಳು ಮೊಲದ ಜೋರಾದ ಕೂಗಿಗೆ ಆಚೆ ಬಂದವು, ನಂತರ ಎಲ್ಲವನ್ನೂ ಉದ್ದೇಶಿಸಿ ಇಲ್ಲಿಯವರೆಗೂ ಮೊಲವೇ ಆಮೆಯ ಓಟದ ಸ್ಪರ್ಧೆಯಲ್ಲಿ ಸೋತಿತ್ತು ಎಂದಿದ್ದರಲ್ಲವೇ ಈಗ ನೋಡಿ ಮತ್ತೊಮ್ಮೆ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದೇನೆ. ಈ ಬಾರಿ ಗೆಲುವು ನನ್ನದೇ ಎನ್ನುತ್ತಾ ಆಮೆಗಳ ವಾಸಸ್ಥಾನಕ್ಕೆ ನಡೆದು ಮುಖಂಡ ಆಮೆಯ ಬಳಿ ಹೋಗಿ ಸ್ಪರ್ಧೆಗೆ ಆಮಂತ್ರಿಸಿತು.
ಆಗ ಮುಖಂಡ ಆಮೆ ಈಗ ಇವೆಲ್ಲಾ ಏಕೆ ಬೇಕು ಅದು ಮುಗಿದು ಹೋದ ಘಟನೆ ಅಲ್ಲವೇ ಎಂದಾಗ ಕೇಳದ ಆಮೆ ಏಕೆ ಸೋತುಬಿಡುವನೆಂಬ ಭಯವೇ, ಹಾಗಾದರೆ ಈಗಲೇ ಸೋಲನ್ನು ಒಪ್ಪಿಕೋ ಎಂದಾಗ ಘನತೆ ಕಾಪಾಡಿಕೊಳ್ಳಲು ವಿಧಿಯಿಲ್ಲದೆ ಆಮೆ ದೇವರನ್ನು ಒಮ್ಮೆ ಪ್ರಾರ್ಥಿಸಿ ಸ್ಪರ್ಧೆಗೆ ಒಪ್ಪಿಕೊಂಡಿತು.
ನಿಗದಿ ಪಡಿಸಿದ ದಿನದಂದು ಸ್ಪರ್ಧೆ ಏರ್ಪಾಡಾಯಿತು, ಕಾಡಿನ ಎಲ್ಲಾ ಪ್ರಾಣಿಗಳೆಲ್ಲಾ ಕುತೂಹಲದಿಂದ ಸ್ಪರ್ಧೆ ನೋಡಲು ಅಲ್ಲಿ ಕಿಕ್ಕಿರಿದು ನಿಂತಿದ್ದವು, ಈ ಬಾರಿ ಮೊಲವೇ ಗೆಲ್ಲುವುದು ನಿಶ್ಷಿತ ಎಂದು ಎಲ್ಲವೂ ಮನದಲ್ಲಿ ಯೋಚಿಸುತ್ತಾ ನಿಂತಿರುವಾಗ ಮೇಲು ಉಸ್ತುದಾರ ನರಿ ಒಂದು, ಎರಡು, ಮೂರು ಎನ್ನುತ್ತಲೇ ಆಮೆ ಮತ್ತು ಮೊಲದ ಓಟ ಪ್ರಾರಂಭವಾಯಿತು. ಆಮೆ ಓಡುವುದು ನಡೆಯುವಂತೆ ಕಾಣುತಿದ್ದರೆ ಮೊಲದ ಓಟ ಮಿಂಚಿನಂತೆ ಇತ್ತು ಇದನ್ನೆಲ್ಲಾ ನೋಡುತ್ತಿದ್ದ ಉಳಿದ ಪ್ರಾಣಿಗಳು ಹೋ ಎಂದು ಜೋರಾಗಿ ಕೂಗುತ್ತಾ, ಈ ಬಾರಿ ಮೊಲದ ಗೆಲುವು ನಿಶ್ಷಿತ, ಆಮೆ ಸೋಲು ಖಂಡಿತ ಎಂದು ಕೂಗುತ್ತಿದ್ದರೆ, ಆಗಲೇ ಅರ್ಧದಷ್ಟು ಮುಂದೆ ಓಡಿದ್ದ ಮೊಲ ಎಲ್ಲ ಪ್ರಾಣಿಗಳ ಒಕ್ಕೊರಲಿನ ಕೂಗು ಕೇಳಿ ಬಹಳ ಹರ್ಷಿತವಾಗಿ ಮನ ವಿಚಲಿತವಾದಂತೆ ಆಗಿ ಒಮ್ಮೆ ಆಮೆಯನ್ನು ಹಿಂದೆ ತಿರುಗಿ ನೋಡಿದಾಗ ಅದು ಬಹಳ ಹಿಂದೆ ಉಳಿದಿತ್ತು, ಇದು ಇನ್ನು ಬರುವಷ್ಟರಲ್ಲಿ ಎಲ್ಲರಿಗೊಮ್ಮೆ ಕೃತಜ್ಞತೆ ಸಲ್ಲಿಸೋಣ ಎಲ್ಲರೂ ನನಗೆ ಉತ್ಸಾಹ ಕೊಡುತ್ತಿದ್ದಾರೆ ಇದು ನನ್ನ ಧರ್ಮ ಎಂದು ಯೋಚಿಸಿ ಅಲ್ಲೇ ನಿಂತು ಒಮ್ಮೆ ಎಲ್ಲ ಪ್ರಾಣಿಗಳನ್ನೂ ನೋಡಿ, ನೋಡಿ ನನ್ನ ಮಿತ್ರರೆ ಮತ್ತು ಬಂಧುಬಾಂಧವರೆ ನಿಮ್ಮೆಲ್ಲರ ಉತ್ಸಾಹಕ್ಕೆ ಇನ್ನು ತಣ್ಣೀರು ಎರಚುವುದು ಇಲ್ಲ, ನಿಮ್ಮೆಲರ ನಿರೀಕ್ಷೆಗಳನ್ನು ನಾನು ಹುಸಿ ಮಾಡುವುದಿಲ್ಲ, ನಾನು ಈ ಬಾರಿ ಗೆದ್ದು ನನ್ನ ವಿಜಯವನ್ನು ಇಡೀ ಜಗತ್ತಿಗೇ ಸಾರುತ್ತೇನೆ, ನನ್ನ ಮೇಲೆ ಇದ್ದ ಕಳಂಕವನ್ನು ನಾನು ನಿವಾರಿಸಿ ಕೊಳ್ಳುತ್ತೇನೆ. ಈ ಬಾರಿ ಈ ಆಮೆಯದೇ ಸೋಲು ನಿಶ್ಷಿತ, ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಉದ್ದ ಭಾಷಣ ಮಾಡುತ್ತಿರುವಾಗಲೇ, ಆಮೆ ಮೊಲದ ಸೀಮೆ ದಾಟಿ ಮುಂದೆ ಹೋಯಿತು. ಆದರೆ ಮೊಲಕ್ಕೆ ಸಮಯ ಹೋದದ್ದೇ ಗೊತ್ತಾಗಲಿಲ್ಲ, ಎಲ್ಲ ಪ್ರಾಣಿಗಳು ಆಮೆ ಮುಂದಾಗುತ್ತಿದೆ ಎಂದು ಕಣ್ಣಿನಿಂದ ಸಂಜ್ಞೆ ಕೊಡುತ್ತಿದ್ದರೂ ಕೇಳಿಸಿಕೊಳ್ಳದ ಮೊಲ ಗರ್ವದಿಂದ ಇನ್ನು ಮಾತನಾಡುತ್ತಲೇ ಇತ್ತು. ಕೊನೆಗೆ ಜೋರಾದ ಧ್ವನಿಯೊಂದು ಕೇಳಿ ಬಂದಿತು. ಈ ಬಾರಿಯೂ ಆಮೆಯೇ ಓಟದ ಸ್ಪರ್ಧೆಯಲ್ಲಿ ಗೆದ್ದಿದೆ ಎಂದು, ಮೊಲ ತಿರುಗಿ ನೋಡಿದಾಗ ನರಿಯ ಘೋಷಣೆಯಾಗಿತ್ತು ಮತ್ತು ಆಮೆಯಾಗಲೇ ಅಂತಿಮ ಸೀಮೆ ದಾಟಿಯಾಗಿತ್ತು.
ಆಗ ಮೊಲ ಅರೆ ಇದು ಹೇಗೆ ಸಾಧ್ಯ ಎಂದು ಯೋಚಿಸುವಾಗಲೇ ನರಿ ಮೊಲದ ಬಳಿ ಬಂದು ಹೇಳಿತು ನಿನ್ನ ಗರ್ವವೇ ಇದಕ್ಕೆ ಕಾರಣ, ಏನಾದರೂ ಸಾಧಿಸುತ್ತಿರುವಾಗ ಗುರಿಯ ಮುಂದೆ ನಮ್ಮ ಗಮನವಿರಬೇಕು, ಅದು ಬಿಟ್ಟು ಹೊಗಳು ಭಟ್ಟರ ಬಾಯಿಗೆ ಕಿವಿಯಾಗಬಾರದು, ನೀನು ಈ ಬಾರಿಯೂ ಸೋತಿರುವೆ ಎಂದಾಗ ಮೊಲ ಹೌದು ನಾನು ಮಾನಸಿಕ ವಿಚಲಿತನಾದೆ, ಅತೀ ಆತ್ಮವಿಶ್ವಾಸ ನನ್ನನ್ನು ಸೋಲುವಂತೆ ಮಾಡಿತು ಎಂದು ತಲೆ ತಗ್ಗಿಸಿ ಹೇಳುತ್ತಾ ಆಮೆಗೆ ಬಂದು ಶರಣಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx