ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದಲ್ಲಿ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.
ರೈತ ನಾಗೇಶ್ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಕೇವಲ ನಾಲ್ಕೈದು ದಿನಗಳ ಪ್ರಾಯದ ನಾಲ್ಕು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಗದ್ದೆಯಲ್ಲಿ ಮರಿಗಳನ್ನು ಕಂಡ ತಕ್ಷಣ ಎಚ್ಚೆತ್ತ ಸ್ಥಳೀಯರು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಮರಿಗಳ ಸುರಕ್ಷತೆ ಹಾಗೂ ತಾಯಿ ಚಿರತೆಯ ಚಲನವಲನದ ಬಗ್ಗೆ ಅರಣ್ಯ ಇಲಾಖೆ ತೀವ್ರ ನಿಗಾ ವಹಿಸಿದೆ. ಅಲ್ಲದೆ, ತಾಯಿ ಚಿರತೆಯನ್ನು ಸೆರೆಹಿಡಿಯಲು ಬೋನ್ ಅಳವಡಿಸಲು ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ.
ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಕಂಡುಬಂದ ಹಿನ್ನೆಲೆಯಲ್ಲಿ, ತಾಯಿ ಚಿರತೆ ಯಾವಾಗ ಬೇಕಾದರೂ ದಾಳಿ ಮಾಡಬಹುದು ಎಂಬ ಭೀತಿಯಲ್ಲಿ ಗ್ರಾಮಸ್ಥರು ದಿನ ದೂಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
