ಕೊರಟಗೆರೆ : ಮಳೆಯಆರ್ಭಟದಿಂದ ಚನ್ನಸಾಗರ ಗ್ರಾಮವೇ ಜಯಮಂಗಲಿ ನದಿಯ ನೀರಿನಲ್ಲಿ ಮುಳುಗಿದೆ. 80 ಮನೆಗಳ ಗೋಡೆಗಳು ಬಿರುಕುಬಿಟ್ಟು ಭಯದ ವಾತಾವರಣ ನಿರ್ಮಾಣವಾಗಿದೆ. ರೈತರು ಮನೆಯಲ್ಲಿ ಶೇಖರಣೆ ಮಾಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ಧವಸದಾನ್ಯ ಮಳೆಯ ನೀರಿನಲ್ಲಿ ಕೊಚ್ಚಿಹೋಗಿದೆ. ಮಧುಗಿರಿ ಆಡಳಿತ ಮತ್ತು ತುಮಕೂರು ಜಿಲ್ಲಾಡಳಿತ ತಕ್ಷಣ ರೈತರ ನೆರವಿಗೆ ಧಾವಿಸಬೇಕಾಗಿದೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರ ಪುರವಾರ ಹೋಬಳಿ ಕೊಡಗದಾಲ ಗ್ರಾಪಂ ವ್ಯಾಪ್ತಿಯ ಚನ್ನಸಾಗರ ಗ್ರಾಮದಲ್ಲಿ ಒಟ್ಟು 80ಕ್ಕೂ ಅಧಿಕ ಕುಟುಂಬಗಳಿವೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 400 ಕ್ಕೂ ಅಧಿಕ ಜನತೆ ವಾಸವಿದ್ದಾರೆ. ಸ್ಥಳೀಯವಾಗಿ ಸರಕಾರಿ ಶಾಲೆ ಅಂಗನವಾಡಿ ಕೇಂದ್ರವಿದ್ದು, ಮಳೆಯ ನೀರಿನಲ್ಲಿ ಮುಳುಗಡೆ ಆಗಿ ಸಮಸ್ಯೆ ಸೃಷ್ಟಿಯಾಗಿದೆ.
ಚನ್ನಸಾಗರ ಗ್ರಾಮದ 80ಮನೆಯಲ್ಲಿ ರೈತರು ಶೇಖರಣೆ ಮಾಡಿದ್ದ ರಾಗಿ, ಭತ್ತ ಮತ್ತು ದಿನಸಿ ವಸ್ತುಗಳು ಸಂಪೂರ್ಣ ನಾಶವಾಗಿದೆ. ಜಯಮಂಗಳಿ ನದಿಯ ನೀರು ಮನೆಯೊಳಗೆ ನುಗ್ಗಿರುವ ಪರಿಣಾಮ ಮನೆಯ ಆವರಣ ಕೆಸರು ಗದ್ದೆಯಾಗಿದೆ. ವಿದ್ಯಾರ್ಥಿಗಳ ಪುಸ್ತಕ ಮತ್ತು ರೈತರ ದಾಖಲೆಗಳು ಸಂಪೂರ್ಣ ನೀರಿನಲ್ಲಿ ಕೊಚ್ಚಿಹೋಗಿವೆ. ಜಾನುವಾರುಗಳಿಗೆ ಶೇಖರಣೆ ಮಾಡಿದ್ದ ಮೇವು ಸಹ ನೀರಿನಲ್ಲಿ ಹರಿದುಹೋಗಿದೆ.
ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಯ ಸಂಗಮಸ್ಥಳವಾದ ಚನ್ನಸಾಗರ ಗ್ರಾಮವು ಅಪಾಯ ಸ್ಥಿತಿಗೆ ತಲುಪಿದೆ. 3ನದಿಗಳ ಸಂಗಮ ಸ್ಥಳಕ್ಕೆ ಸರಕಾರ ಹೆಚ್ಚಿನ ಭದ್ರತೆಯ ಜೊತೆಗೆ ಅಭಿವೃದ್ದಿಗೆ ಆಧ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಗೌರಿಬಿದನೂರು-ಮಧುಗಿರಿಯ ನಡುವೆಯ ಸೇತುವೆಯ ಸಮೀಪವೇ ಇರುವ ಗ್ರಾಮಕ್ಕೆ ಹೆಚ್ಚಿನ ಜಾಗೃತಿ ಮತ್ತು ಕಾಳಜಿಯ ಅವಶ್ಯಕತೆ ಇದೆ.
ಪಡಿತರ ಕಿಟ್ ವಿತರಿಸಿದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್:
ಜಯಮಂಗಲಿ ನದಿಯ ನೀರಿನಿಂದ ಚನ್ನಸಾಗರ ಗ್ರಾಮವು ಜಲಾವೃತವಾದ ಪರಿಣಾಮ ಮಾಜಿ ಶಾಸಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ನೇತೃತ್ವದ ತಂಡ ಚನ್ನಸಾಗರ ಗ್ರಾಮಕ್ಕೆ ಭೇಟಿ ನೀಡಿ 80 ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಅಂಗನವಾಡಿ ಕೇಂದ್ರದಲ್ಲಿದ್ದ ದಾಖಲೆ ಮತ್ತು ದಿನಸಿ ಸಾಮಾನು ನಾಶವಾಗಿವೆ. ಪ್ರಸ್ತುತವು ಕಟ್ಟಡದೊಳಗೆ ನೀರಿನಿಂದ ಜಲಾವೃತವಾಗಿದೆ. ಮಕ್ಕಳ ಆಡಿಕೆ ಸಾಮಾನು ಮತ್ತು ಟೇಬಲ್ ಹಾಳಾಗಿವೆ. ಅಂಗನವಾಡಿ ಕೇಂದ್ರ ಸ್ಥಳಾಂತರಕ್ಕೆ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಚನ್ನ ಸಾಗರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸರಸ್ಪತಿ ತಿಳಿಸಿದರು.
ಚನ್ನಸಾಗರ ಗ್ರಾಮದ 80 ಮನೆಗಳಲ್ಲಿ 380ಕ್ಕೂ ಅಧಿಕ ಜನ ವಾಸವಿದ್ದಾರೆ. ಮುಂಜಾನೆ ಘಟನೆಯಾದ ಪರಿಣಾಮ ನಾವೇಲ್ಲ ಬದುಕಿದ್ದೇವೆ. ಜಾನುವಾರುಗಳ ರಕ್ಷಣೆ ಮತ್ತು ಬಿತ್ತನೆ ಮಾಡಿದ ಬೆಳೆಯು ಮುಳುಗಿದೆ. ಅಂಗನವಾಡಿ ಮತ್ತು ಶಾಲೆಗೆ ತೆರಳಲು ಮಕ್ಕಳ ವ್ಯಾಸಂಗಕ್ಕೆ ಸಮಸ್ಯೆ ಎದುರಾಗಿದೆ. ನಮಗೆ ಶಾಶ್ವತವಾದ ಪರಿಹಾರವನ್ನು ಸರಕಾರ ಮಾಡಬೇಕಿದೆ ಎಂದು ಗ್ರಾಮಸ್ಥ ಲಕ್ಷ್ಮಿನಾರಾಯಣ ಆಗ್ರಹಿಸಿದರು.
ಚನ್ನಸಾಗರ ಗ್ರಾಮವು ನೀರಿನಿಂದ ಜಲಾವೃತವಾಗಿ ಮನೆಯಲ್ಲಿದ್ದ ದವಸಧಾನ್ಯ ನಾಶವಾಗಿವೆ. ಮನೆಗಳ ಗೂಡೆಗಳು ಕುಸಿದು ರೈತರ ಜೀವನ ಬೀದಿಗೆ ಬಂದಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಈಗಾಗಲೇ ಸಮಸ್ಯೆ ಎದುರಾಗಿದೆ. ನಾನು ಇಂದು 80ಕುಟುಂಬಕ್ಕೆ ಆಹಾರದ ಕಿಟ್ ವಿತರಿಸಿದ್ದೇನೆ. ಸರಕಾರ ತಕ್ಷಣ ರೈತರ ನೆರವಿಗೆ ಆಗಮಿಸಬೇಕಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಒತ್ತಾಯಿಸಿದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz