ತುಮಕೂರು: ಜಿಲ್ಲೆಯಲ್ಲಿ ಆರಂಭವಾಗಿರುವ ಜನಗಣತಿ (ಮನೆ ಗಣತಿ) ಕಾರ್ಯಕ್ಕೆ ಆರಂಭದಲ್ಲೇ ತಾಂತ್ರಿಕ ವಿಘ್ನ ಎದುರಾಗಿದೆ. ಗಣತಿಗಾಗಿ ಬಳಸಬೇಕಾದ ‘ಹೌಸ್ ಲಿಸ್ಟಿಂಗ್ ಆಪರೇಟಿಂಗ್ ಆ್ಯಪ್’ (HLO) ಸರಿಯಾಗಿ ಕೆಲಸ ಮಾಡದ ಕಾರಣ ಗಣತಿದಾರರಾಗಿ ನೇಮಕಗೊಂಡಿರುವ ಶಿಕ್ಷಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗಣತಿ ಕಾರ್ಯಕ್ಕೆ ಕನಿಷ್ಠ ಆಂಡ್ರಾಯ್ಡ್ 10 ಆವೃತ್ತಿಯ ಮೊಬೈಲ್ ಅಗತ್ಯವಿದೆ. ಆದರೆ, ಅನೇಕ ಶಿಕ್ಷಕರು ಹಳೆಯ ಮಾದರಿಯ ಮೊಬೈಲ್ ಹೊಂದಿದ್ದು, ಅವುಗಳಲ್ಲಿ ಆ್ಯಪ್ ಇನ್ ಸ್ಟಾಲ್ ಆಗುತ್ತಿಲ್ಲ.
ಆ್ಯಪ್ ಕೆಲಸ ಮಾಡದ ಕಾರಣ ಅನಿವಾರ್ಯವಾಗಿ ಶಿಕ್ಷಕರು ₹15,000 ದಿಂದ ₹20,000 ಖರ್ಚು ಮಾಡಿ ಹೊಸ ಮೊಬೈಲ್ ಖರೀದಿಸುತ್ತಿದ್ದಾರೆ. ಗಣತಿ ಕಾರ್ಯ ಮುಗಿಸಿದರೆ ಅವರಿಗೆ ಸಿಗುವ ಗೌರವಧನ ಕೇವಲ ₹25,000, ಆದರೆ ಅದಕ್ಕೂ ಮೊದಲೇ ಮೊಬೈಲ್ ಗಾಗಿ ದೊಡ್ಡ ಮೊತ್ತ ವ್ಯಯಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಒಂದು ವೇಳೆ ಆ್ಯಪ್ ಇನ್ ಸ್ಟಾಲ್ ಆದರೂ, ಲಾಗಿನ್ ಆಗುವಾಗ ಸರ್ವರ್ ಸಮಸ್ಯೆ ಕಾಡುತ್ತಿದೆ. ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದ್ದು, ಲಾಗಿನ್ ಆದ ನಂತರ ಮೊಬೈಲ್ ಗೆ ಬರಬೇಕಾದ ಓಟಿಪಿ (OTP) ಬರುತ್ತಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಸಮೀಕ್ಷೆಗೆ ಪೂರಕವಾಗಿ ಯಾವುದೇ ಟ್ಯಾಬ್ ಅಥವಾ ಮೊಬೈಲ್ ವಿತರಿಸಿಲ್ಲ. ತಂತ್ರಜ್ಞಾನದ ಅರಿವಿಲ್ಲದ ಹಿರಿಯ ಶಿಕ್ಷಕರಿಗೆ ಈ ಪ್ರಕ್ರಿಯೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


