ಆಂಧ್ರಪ್ರದೇಶ: ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾದದ್ದು ಎಂಬುದು ಗೊತ್ತಿದ್ದರೂ ಈ ಕಾಯ್ದೆ ಉಲ್ಲಂಘಿಸಿ ಇಲ್ಲೊಬ್ಬ ಬೇಟೆಯಾಡಿದ್ದು ಮಾತ್ರವಲ್ಲ ಅದನ್ನು ತನ್ನ ಯೂಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡಿದ್ದಾನೆ. ಈಗ ಪೋಲೀಸರ ಅತಿಥಿಯಾಗಿದ್ದಾನೆ.
ಆಂಧ್ರಪ್ರದೇಶ ನಂದ್ಯಾಲ ಜಿಲ್ಲೆಯ ಕೋವೆಲಕುಂಟ್ಲ ಮಂಡಲದ ವಲ್ಲಂಪಾಡು ಗ್ರಾಮದ ಸೂರ್ಯನಾರಾಯಣ ಎಂಬಾತ ಎರಡು ದಿನಗಳ ಹಿಂದೆ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಉಡವನ್ನು ಬೇಟೆಯಾಡಿದ್ದು, ಬೇಟೆಯ ದೃಶ್ಯಗಳನ್ನು ಸೆಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದಾನೆ. ಬಳಿಕ ತಾನು ಹೇಗೆ ಉಡ ಅನ್ನು ಬೇಟೆಯಾಡಿದೆ ಎನ್ನುವ ಕುರಿತು ವಿಡಿಯೋದಲ್ಲಿ ವಿವರಿಸಿ ತನ್ನ ಯೂಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡಿದ್ದಾನೆ.
ಇದನ್ನು ವೀಕ್ಷಿಸಿದ ಹೈದರಾಬಾದ್‌ನ ಸ್ಟ್ರೇ ಅನಿಮಲ್ ಫೌಂಡೇಶನ್ ಆಫ್ ಇಂಡಿಯಾ ಸಂಸ್ಥೆ ಯು ನಂದ್ಯಾಲ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ದೂರು ನೀಡಿದೆ. ಮಾಹಿತಿ ಆಧರಿಸಿ ವಲ್ಲಂಪಾಡು ಗ್ರಾಮಕ್ಕೆ ಬಂದ ಅರಣ್ಯಾಧಿಕಾರಿಗಳು ಸೂರ್ಯನಾರಾಯಣನನ್ನು ಬಂಧಿಸಿದ್ದಾರೆ.


