ಮಕ್ಕಳ ಮಾರಾಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು, ಆರೋಪಿಗಳು ಆರು ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಮಹಾಲಕ್ಷ್ಮಿ, ನಕಲಿ ವೈದ್ಯ ಕೆವಿನ್, ಆರ್. ಟಿ. ನಗರದ ನಿವಾಸಿ ರಮ್ಯಾ, ತಮಿಳುನಾಡಿನ ಈರೋಡ್ ಕಣ್ಣನ್ ರಾಮಸ್ವಾಮಿ, ಆತನ ಸಹಚರರಾದ ಗೋಮತಿ, ಹೇಮಲತಾ, ರಾಧಾ, ಸುಹಾಸಿನಿ, ಶರಣ್ಯ, ಮುರುಗೇಶ್ವರಿ ಅವರನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಹಸುಗೂಸುಗಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 10 ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಪೈಕಿ ಮಹಾಲಕ್ಷ್ಮಿ ಎಂಬಾಕೆ ತರಕಾರಿ ಮಾರಾಟ ಮಾಡುತ್ತಲೇ ಮಕ್ಕಳ ಡೀಲ್ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಮಹಾಲಕ್ಷ್ಮಿ ತರಕಾರಿ ಮಾರುತ್ತಿದ್ದ ಈಕೆ ಹಲವರನ್ನು ಪರಿಚಯ ಮಾಡಿಕೊಂಡು ಯಾವುದಾದರೂ ಗ್ರಾಹಕರಿಗೆ ಮಕ್ಕಳಿಲ್ಲ ಎಂಬ ವಿಚಾರ ಗೊತ್ತಾದರೇ ಅವರ ಜೊತೆ ಇನ್ನೂ ಹೆಚ್ಚು ಸಲುಗೆ ಬೆಳೆಸುತ್ತಿದ್ದಳು. ಬಳಿಕ ಅವರ ನಂಬರ್ ಪಡೆದು ಪ್ರತಿನಿತ್ಯ ಮಾತನಾಡಲು ಶುರು ಮಾಡುತ್ತಿದ್ದಳು. ನಂತರ ಮಕ್ಕಳು ಬೇಕು ಎಂದವರಿಗೆ ನನಗೆ ಪರಿಚಯ ಇರುವವರ ಬಳಿ ಸಿಗುತ್ತದೆ ಎಂದು ಹೇಳಿ ತಮಿಳುನಾಡಿನ ರಾಧಾಳಿಗೆ ಕರೆ ಮಾಡುತ್ತಿದ್ದಳು. ಅಲ್ಲಿಂದ ಮಕ್ಕಳ ಫೋಟೋಗಳನ್ನು ಕಳುಹಿಸಿಕೊಂಡು ಮಹಾಲಕ್ಷ್ಮಿ ಡೀಲ್ ಮಾಡುತ್ತಿದ್ದು, ತರಕಾರಿ ಮಾರುತ್ತಲೇ ಗಾಳ ಹಾಕುತ್ತಿದ್ದಳು.


