ಉತ್ತರ ಪ್ರದೇಶ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯರೊಬ್ಬರು ಪತ್ನಿ, ತನ್ನಿಬ್ಬರು ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿ ರೈಲ್ವೇ ಕಾಲೊನಿಯಲ್ಲಿ ನಡೆದಿದೆ. ರೈಲ್ವೆಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನೇತ್ರ ತಜ್ಞ, 45 ವರ್ಷದ ಡಾ. ಅರುಣ್ ಕುಮಾರ್ ಈ ಕೃತ್ಯ ಎಸಗಿದ್ದಾರೆ. ಅವರನ್ನು ರಾಯ್ ಬರೇಲಿಯ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ನಿಯೋಜಿಸಲಾಗಿತ್ತು. ಡಾ. ಅರುಣ್ ಕುಮಾರ್ ಡಿಪ್ರೆಶನ್ ನಿಂದ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ .
ಡಾ. ಅರುಣ್ ಕುಮಾರ್, ಪತ್ನಿ ಅರ್ಚನಾ, ಪುತ್ರಿ ಆದಿವಾ (12) ಮತ್ತು ಪುತ್ರ ಆರವ್ (12) ಮೃತದೇಹ ಮನೆಯೊಳಗೆ ರಕ್ತಸಿಕ್ತವಾಗಿ ಕಂಡು ಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮನೆಯೊಳಗೆ ರಕ್ತಸಿಕ್ತವಾದ ಸುತ್ತಿಗೆ ಮತ್ತು ರಾಸಾಯನಿಕ ತುಂಬಿದ ಇಂಜೆಕ್ಷನ್ ಕಂಡು ಬಂದಿದೆ. ಡಾ. ಅರುಣ್ ಕುಮಾರ್ ಮೊದಲು ಮಕ್ಕಳು ಮತ್ತು ಪತ್ನಿಗೆ ಇಂಜೆಕ್ಷನ್ ಚುಚ್ಚಿ ಪ್ರಜ್ಞೆ ತಪ್ಪಿಸಿ ಬಳಿಕ ಅವರ ತಲೆಗೆ ಸುತ್ತಿಗೆಯಿಂದ ಬಡಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


