ತುಮಕೂರು: ಡಿಸೆಂಬರ್ 6ಕ್ಕೆ ನಿರ್ಧಾರ ಹೇಳ್ತೇನೆ ಎಂದಿದ್ದ ಮಾಜಿ ಸಚಿವ ವಿ ಸೋಮಣ್ಣ ಈಗ ಉಲ್ಟಾ ಹೊಡೆದಿದ್ದಾರೆ, ತುಮಕೂರಿಗೆ ಆಗಮಿಸಿದ್ದ ಅವರು ಪಕ್ಷ ಸೇರ್ಪಡೆ ನಿರ್ಧಾರದ ಬಗ್ಗೆ ಗುಟ್ಟು ಬಿಟ್ಟು ಕೊಡದೇ ಮತ್ತೆ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡುತ್ತಾ ತಮ್ಮ ನಿರ್ಧಾರ ತಿಳಿಸದೇ ಹೈಕಮಾಂಡ್ ಪ್ರತಿಕ್ರಿಯೆಗೆ ಕಾಯುತ್ತೇನೆ ಎಂದರು, ಇದರ ಜೊತೆ ಶಾಸಕ ಯತ್ನಾಳ್ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನೂ ಹೇಳಿದರು. ಶಾಸಕ ಯತ್ನಾಳ್ ಸುಸಂಸ್ಕೃತ ರಾಜಕಾರಣಿ, ಅವರ ನೋವನ್ನು ನೇರವಾಗಿ ಹೇಳಿಕೊಂಡಿದ್ದಾರೆ , ಯತ್ನಾಳ್ ಅವರು ಇತ್ತೀಚೆಗೆ ಭೇಟಿಯಾಗಿಲ್ಲ, ಕಾಲ ಬಂದಾಗ ಎಲ್ಲಾ ಸರಿ ಹೋಗುತ್ತೆ.ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಹೇಳಿದರು. ಇನ್ನೂ 2-3 ದಿನ ಕಾಯುತ್ತೇನೆ ಡಿಸೆಂಬರ್ 6ಕ್ಕೆ ಅಲ್ಲ, 6ರ ನಂತರ ನಿರ್ಧಾರ ಹೇಳ್ತೇನೆ, ಇನ್ನೂ 2-3 ದಿನ ಹೈಕಮಾಂಡ್ ಪ್ರತಿಕ್ರಿಯೆಗೆ ಕಾಯುತ್ತೇನೆ ಎಂದು ಮಾಜಿ ಸಚಿವ ಸೋಮಣ್ಣ ಹೇಳಿದರು.
14-15 ವರ್ಷ ಮಂತ್ರಿ ಆಗಿದ್ದೆ ಅನ್ನೋದಕ್ಕಿಂತ ಧ್ವನಿ ಇಲ್ಲದವರಿಗೆ ಕೆಲಸ ಮಾಡಿದ್ದೇನೆ.ನನ್ನ ನೇರ ನುಡಿಯ ಸಂಸ್ಕಾರ ಸಿದ್ದಗಂಗಾ ಮಠದಿಂದ ಬಂತು.ವರಿಷ್ಟರು ಯಾವ ರೀತಿ ನಡೆದುಕೊಳ್ಳಬೇಕು ಅಂತ ಹೇಳ್ತಾರೆ ಗೊತ್ತಿಲ್ಲ. ಅರ್ಹತೆ ಗುರುತಿಸುವ ಮಾನದಂಡ ಈ ರೀತಿ ಆಗಿರಬಾರದು, ಅರ್ಹತೆ ಅವಕಾಶ ವಂಚಿತವಾಗಬಾರದು. ಅರ್ಹತೆ ಯಾರ ಮನೆಯ ಸ್ವತ್ತಲ್ಲ, ಹೈಕಮಾಂಡ್ ಆಗಿರುವ ತಪ್ಪನ್ನು ಯಾವ ರೀತಿ ಸರಿ ಪಡಿಸುತ್ತಾರೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದರು.


