ರಾಜ್ಯ ಸರಕಾರಕ್ಕೆ ಬರಗಾಲದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಕೊಡಬೇಕು ಎನ್ನುವುದು ಪ್ರಾಮಾಣಿಕ ಕಳಕಳಿ ಇಲ್ಲ. ಆದರೆ ಅಲ್ಪ ಸಂಖ್ಯಾತರಿಗೆ 10 ಸಾವಿರ ರೂ. ಕೋಟಿ ನೀಡುವುದಾಗಿ ಸಿಎಂ ಘೋಷಣೆ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಪರಿಹಾರ ಕೊಡಲು ಸರಕಾರದ ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಅಲ್ಪಸಂಖ್ಯಾತರಿಗೆ ಹಣ ಕೊಡುತ್ತೇವೆ ಎಂದು ಸಿಎಂ ಹೇಳುತ್ತಾರೆ. ರಾಜ್ಯ ಸರಕಾರದ ಆದ್ಯತೆ ಸಂಕಷ್ಟದಲ್ಲಿರುವ ರೈತರಲ್ಲ. ಇವರ ಸಮಸ್ಯೆಗಳಿಗೆ ರಾಜ್ಯ ಸರಕಾರ ಸ್ಪಂದನೆ ಮಾಡುತ್ತಿಲ್ಲ. ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಅಧಿವೇಶನ ಸಂದರ್ಭದಲ್ಲಿಯೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಸರಕಾರಕ್ಕೆ ರೈತರ ಬಗ್ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈ ಕುರಿತು ಸದನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡುತ್ತೇನೆ ಎಂದರು.
ಪೃಥ್ವಿ ಸಿಂಗ್ ಮೇಲೆ ಹಲ್ಲೆ ವಿಚಾರಕ್ಕೆ ಉತ್ತರಿಸಿ, ಬಿಜೆಪಿಯ ದಲಿತ ಮುಖಂಡನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಆಗಿದೆ. ಪೊಲೀಸ್ ಅಧಿಕಾರಿಗಳು ಜಸ್ಟ್ ಕೇಸ್ ಮಾತ್ರ ದಾಖಲು ಮಾಡಿದ್ದಾರೆ. ಅಟೆಮ್ಟ್ ಟೂ ಮರ್ಡರ್ ಕೇಸ್ ಹಾಕೋದಿಲ್ಲ, 307 ಕೇಸ್ ಹಾಕೋದಿಲ್ಲ. ಅದರ ಬದಲು ಕಾಂಗ್ರೆಸ್ ಎಂಎಲ್ ಸಿ ಮೇಲೆ ಎ1 ಮಾಡಿದ್ದಾರೆ. ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ ಎಂದರು.


