ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ವರಹಸಂದ್ರ ಗೊಲ್ಲರಟ್ಟಿಯಲ್ಲಿ ಮೂಢನಂಬಿಕೆಗಳ ಕಾರಣದಿಂದ ಊರಿನಿಂದ ಹೊರಗೆ ಇಟ್ಟಿದ್ದ, ಮೂವರು ಹೆಣ್ಣು ಮಕ್ಕಳು, ಒಂದು ಪುಟ್ಟ ಮಗುವನ್ನು, ಜೊತೆಗೆ ಪೂಜಾರಿ ಕುಟುಂಬದ ಹೆಣ್ಣು ಮಗಳನ್ನು ತಾಲೂಕು ದಂಡಾಧಿಕಾರಿ ವೈ.ಎಂ. ರೇಣು ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಮನೆಗೆ ಸೇರಿಸಿದೆ.
ತಹಶೀಲ್ದಾರ್ ವೈ.ಎಂ. ರೇಣು ಕುಮಾರ್ ಹಾಗೂ ಹಲವು ಮೇಲಾಧಿಕಾರಿಗಳ ತಂಡ ತಾಲೂಕಿನ ಪ್ರತಿಯೊಂದು ಗೊಲ್ಲರಹಟ್ಟಿಗೆ ಭೇಟಿಕೊಟ್ಟು, ಮೂಢನಂಬಿಕೆಗಳ ವಿರುದ್ಧ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೂಡ ಮಾಡಿದ್ದರು, ಆದರೆ ವರಹಸಂದ್ರ ಗೊಲ್ಲರಹಟ್ಟಿ ಗ್ರಾಮದಲ್ಲಿ ಮೂಢನಂಬಿಕೆಗಳ ವಿರುದ್ಧ ಅಧಿಕಾರಿಗಳು ಮಾಡಿದ ಕಾರ್ಯಕ್ರಮಕ್ಕೂ ಜಗ್ಗದೆ ತಮ್ಮ ಮೂಢನಂಬಿಕೆಗಳನ್ನೇ ಮುಂದುವರಿಸಿಕೊಂಡು ಹೆಣ್ಣು ಮಕ್ಕಳನ್ನು ಊರಿನಿಂದ ಆಚೆ ಇಡುವ ಪದ್ಧತಿಯನ್ನೇ ಮುಂದುವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವರಹಸಂದ್ರ ಗೊಲ್ಲರಟ್ಟಿ ಗ್ರಾಮಕ್ಕೆ ಬೆಳಿಗ್ಗೆ 5:45 ಕ್ಕೆ ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಗಳೊಂದಿಗೆ ಭೇಟಿ ಕೊಟ್ಟ ತಹಶೀಲ್ದಾರ್, ಹೆಣ್ಣು ಮಕ್ಕಳನ್ನು ಮನೆಗೆ ಸೇರಿಸುವ ಕಾರ್ಯ ಮಾಡಿದ್ದಾರೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ.


