ರಾಯ್ ಪುರ: ಛತ್ತೀಸ್ ಗಢದ ಬುಡಕಟ್ಟು ಬಸ್ತಾರ್ ಪ್ರದೇಶದ ಕೊಂಡಗಾಂವ್ ಜಿಲ್ಲೆಯ ಕೆರ್ವಾಹಿ ಸೆಕೆಂಡರಿ ಶಾಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಸುಮಾರು 25 ವಿದ್ಯಾರ್ಥಿಗಳ ಕೈಗೆ ಶಿಕ್ಷಕರು ಬಿಸಿ ಎಣ್ಣೆ ಸುರಿದು ಅಮಾನವೀಯತೆ ಮೆರೆದ ಘಟನೆ ನಡೆದಿದೆ.
ನಿಗದಿತ ಪ್ರದೇಶದ ಹೊರಗಿನ ಶೌಚಾಲಯವನ್ನು ವಿದ್ಯಾರ್ಥಿಗಳು ಬಳಸುತ್ತಿದ್ದರು ಎಂಬ ಸಣ್ಣ ಅಪರಾಧಕ್ಕೆ ಶಿಕ್ಷೆಯಾಗಿ ವಿದ್ಯಾರ್ಥಿಗಳು ಪರಸ್ಪರರ ಕೈಗಳಿಗೆ ಬಿಸಿ ಎಣ್ಣೆಯನ್ನು ಸುರಿಯುವಂತೆ ಒತ್ತಾಯಿಸಲಾಯಿತು. ಇದರಿಂದ ಮುಖ್ಯೋಪಾಧ್ಯಾಯಿನಿ ಹಾಗೂ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಶಾಲಾ ಅಧಿಕಾರಿಗಳ ಸಮ್ಮುಖದಲ್ಲಿ ಈ ಘಟನೆ ನಡೆದಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿದೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಮೂವರು ಶಿಕ್ಷಕರನ್ನು ಅಮಾತುಗೊಳಿಸಲಾಗಿದೆ.
ವಿಡಿಯೋ ವೈರಲ್ ಆದ ನಂತರ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಂಡಿದೆ. ಘಟನೆ ಕುರಿತು ಕೂಲಂಕುಷವಾಗಿ ತನಿಖೆ ನಡೆಸಲು ಜಿಲ್ಲಾ ಶಿಕ್ಷಣ ಇಲಾಖೆಯಿಂದ ತನಿಖಾ ತಂಡ ರಚಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಬ್ಲಾಕ್ ಸಂಪನ್ಮೂಲ ಅಧಿಕಾರಿ ತಾಹೀರ್ ಖಾನ್ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆಗೆ ನಿಯೋಜಿಸಿರುವ ಸಮಿತಿಯು ವರದಿಯನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಸಜ್ಜಾಗಿದ್ದು, ಅವರು ಸಂಶೋಧನೆಗಳ ಆಧಾರದ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ .


