ಜಮೀನು ವರ್ಗಾವಣೆ ವಿವಾದದ ಹಿನ್ನೆಲೆಯಲ್ಲಿ ಮಗ ತನ್ನ ತಾಯಿಯ ತಲೆ ಕಡಿದು ಹತ್ಯೆ ಮಾಡಿದ್ದಾನೆ. 65 ವರ್ಷದ ಮಹಿಳೆಯನ್ನು ಕೃಷಿಗೆ ಬಳಸುವ ಚೂಪಾದ ಬ್ಲೇಡ್ ನಿಂದ ಶಿರಚ್ಛೇದ ಮಾಡಲಾಗಿದೆ. ಉತ್ತರ ಪ್ರದೇಶದ ಸೀತಾಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಶನಿವಾರ ಮೆಜಾಪುರ ಗ್ರಾಮದಲ್ಲಿ ಈ ದಾರುಣ ಹತ್ಯೆ ನಡೆದಿದೆ. ತಾಯಿ ಕಮಲಾದೇವಿ (65) ತನ್ನ ಮಗ ದಿನೇಶ್ ಪಾಸಿ (35) ಹೆಸರಿಗೆ ಜಮೀನು ಡೀಡ್ ಮಾಡದ ಹಿನ್ನೆಲೆಯಲ್ಲಿ ವಿವಾದವು ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಲಾದೇವಿ ಅವರ ಮನೆಯ ಹೊರಭಾಗದಲ್ಲಿ ಪತ್ತೆಯಾದ ತಲೆಯಿಲ್ಲದ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ದಿನೇಶ್ ಪಾಸಿ ಮಾದಕ ವ್ಯಸನಿಯಾಗಿದ್ದು, ಕೊಲೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಸೀತಾಪುರ ಎಸ್ಪಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.


