ಬೆಂಗಳೂರು: ಮಲಿನ ನೀರು ಬಂದು ಕೆರೆಗೆ ಸೇರುತ್ತಿರುವ ಕಾರಣ ಐಟಿಬಿಟಿ ಸಿಟಿ, ಸಿಲಿಕಾನ್ ಸಿಟಿ, ಕೆರೆಗಳ ನಗರ ಅಂತಾ ಕರೆಯೋ ಬೆಂಗಳೂರಿನ ಕೆರೆಗಳು ಅಪಾಯದಲ್ಲಿವೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದ್ದರೂ ಇನ್ನೊಂದೆಡೆಗೆ ಮಲಿನ ನೀರು ಬಂದು ಕೆರೆ ಸೇರುತ್ತಿದೆ. ಇದರಿಂದ ಜಲಚರ ಜೀವಿಗಳು ವಾಸ ಮಾಡದೇ ಇರೋ ಮಟ್ಟಕ್ಕೆ ಕೆರೆಗಳ ನೀರು ಕಲುಷಿತ ಆಗಿದೆ. ಮೀನುಗಳು ಸಾವಿನ ಸಂಖ್ಯೆ ಕೆರೆಗಳಲ್ಲಿ ಹೆಚ್ಚಾಗುತ್ತಿದೆ. ಇಷ್ಟೆಲ್ಲ ಆದರೂ ಸರಿಯಾಗಿ ಕೆರೆ ಅಭಿವೃದ್ಧಿ ಮಾಡದಿರುವುದರಿಂದ ಕೆರೆಗಳು ವಿಷಯುಕ್ತವಾಗುತ್ತಿವೆ.
ಕೆರೆಗಳ ಸಂರಕ್ಷಣೆಯಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಬೆಂಗಳೂರು ಮಹಾನಗರದಲ್ಲಿ ಇರುವ ಫ್ಯಾಕ್ಟರಿಗಳು ಹೊರ ಸೂಸುವ ತ್ಯಾಜ್ಯ ಮತ್ತು ರಾಜಕಾಲುವೆಯಿಂದ ಬರುವ ಅನ್ ಟ್ರೀಟೆಡ್ ನೀರಿನಿಂದ ಕೆರೆಗಳು ಕಲುಷಿತ ಆಗಿ ನೀರಿನ ಪಿಎಚ್ ಕಡಿಮೆಯಾಗಿ ಆಕ್ಸಿಜನ್ ಕೊರತೆಯಿಂದಾಗಿ ಜಲಚರ ಜೀವಿಗಳು ಸಾವನ್ನಪ್ಪುತ್ತಿವೆ. ಜಲಚರ ಜೀವಿಗಳಿಗಷ್ಟೇ ಅಲ್ಲದೇ ಕೆರೆ ಪಕ್ಕದ ಮರಗಳಿಗೂ ಇದು ವಿಷವಾಗುತ್ತದೆ ಎಂದು ಪರಿಸರವಾದಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರ ಮತ್ತು ಬಿಬಿಎಂಪಿ, ಬಿಡಿಎ ಕಲುಷಿತ ಆಗದಂತೆ ತಡೆಗಟ್ಟಿ ಕೆರೆ ಸಂರಕ್ಷಣೆಗೆ ಮುಂದಾಗಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.


