ಮಂಡ್ಯ: ಮಳವಳ್ಳಿ ತಾಲೂಕಿನ ದೇಶವಳ್ಳಿ ಗ್ರಾಮದಲ್ಲಿ ಮೊಬೈಲ್ ರಿಚಾರ್ಜ್ ವಿಚಾರಕ್ಕೆ ಸಂಬಂಧಿಸಿ, ಗಲಾಟೆಯಾಗಿ ಪತ್ನಿಯನ್ನೇ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ನಡೆದಿದೆ. ಬಳಿಕ ಪತಿ ಮಗುವಿನ ಜೊತೆ ಪೊಲೀಸರ ಮುಂದೆ ಶರಣಾಗಿದ್ದಾನೆ.
ರಾಡ್ ನಿಂದ ಹೊಡೆದು ಪತ್ನಿ ಮಧುಶ್ರೀ(32) ಅವರನ್ನು ಪತಿ ಮಹದೇವ್(38) ಕೊಲೆ ಮಾಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮೃತ ಮಧುಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಇತ್ತ ಆರೋಪಿ ಮಹದೇವ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಇತ, ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು.
ಮೊಬೈಲ್ ರಿಚಾರ್ಜ್ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಕೋಪಗೊಂಡ ಪತಿ, ರಾಡ್ ನಿಂದ ಹೊಡೆದು ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಮಗು ಜೊತೆ ಪೊಲೀಸರ ಮುಂದೆ ಶರಣಾಗಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಕುರಿತು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


