ಬೆಳಗಾವಿ: ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ ಅಧಿವೇಶನದಲ್ಲೂ ಸದ್ದು ಮಾಡಿದೆ. ಮತ್ತೊಂದೆಡೆ ಮಾತನಾಡಿಸಲು ಯುವತಿ ಮನೆಗೆ ಹೋಗಿದ್ದ ಗ್ರಾ.ಪಂ. ಸದಸ್ಯೆ, ಯುವತಿಯ ತಾಯಿಯ ಸಹೋದರಿ ಎಂಬ ಕಾರಣಕ್ಕೆ ಪ್ರಕರಣದಲ್ಲಿ ಭಾಗಿಯಾಗದಿದ್ದರೂ ಬಂಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಕತಿ ಪೊಲೀಸರ ವಿರುದ್ಧ ಗ್ರಾ.ಪಂ. ಸದಸ್ಯೆ ಸಂಗೀತಾ ಪತಿ ಆಕ್ರೋಶ ಹೊರ ಹಾಕಿದ್ದಾರೆ.
ಯುವತಿಯ ತಾಯಿ ಪಾರ್ವತಿ ಹಾಗೂ ಗ್ರಾ.ಪಂ ಸದಸ್ಯೆ ಸಂಗೀತಾ ಇಬ್ಬರು ಸಹೋದರಿಯರು. ಅಕ್ಕನ ಮಗಳು ಓಡಿ ಹೋದ ಸುದ್ದಿ ಕೇಳಿ ಘಟನೆ ನಡೆದ ದಿನ ಬೆಳಗ್ಗೆ 7ಕ್ಕೆ ಯುವತಿ ಮನೆಗೆ ಸಂಗೀತಾ ಹೋಗಿದ್ದರು. ಇದೇ ವೇಳೆ ಮನೆಗೆ ಬಂದ ಪೊಲೀಸರು ನೀವು ದೂರು ಕೊಡಿ ಬನ್ನಿ, ಅಂತಾ ಕರೆದುಕೊಂಡು ಹೋಗಿ ಕಾಕತಿ ಠಾಣೆಗೆ ಹೋದ ಬಳಿಕ ಸಂಗೀತಾರನ್ನು ಬಂಧಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಪತಿ ಸದಾಶಿವ ಮತ್ತು ಸಹೋದರ ಕಾಡಪ್ಪ ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಸಂಬಂಧ ಏಳು ಮಂದಿ ಪೈಕಿ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ತಾವು ಹೆಣ್ಣಾಗಿದ್ದುಕೊಂಡು, ಮತ್ತೊಬ್ಬ ಹೆಣ್ಣಿನ ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆಂಬ ಆರೋಪ ಸಂಬಂಧ ಅರೆಸ್ಟ್ ಮಾಡಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಈಗ ಗ್ರಾ.ಪಂ ಸದಸ್ಯೆ ಸಂಗೀತಾ ಅವರ ಪತಿ, ನನ್ನ ಹೆಂಡತಿ ಯಾವ ತಪ್ಪೂ ಮಾಡಿಲ್ಲ. ಅಕ್ಕನ ಮಗಳು ಓಡಿ ಹೋದ ವಿಷಯ ತಿಳಿಯುತ್ತಿದ್ದಂತೆ ಮಾತನಾಡಿಸಲು ಹೋಗಿದ್ದಾಗ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.


