ಛತ್ತೀಸ್ ಗಢದ ಎಡಪಂಥೀಯ ಉಗ್ರಗಾಮಿ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಎನ್ ಕೌಂಟರ್. ನಕ್ಸಲರೊಂದಿಗಿನ ಎನ್ ಕೌಂಟರ್ ನಲ್ಲಿ ಸಿಆರ್ ಪಿಎಫ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದರು. ಒಬ್ಬ ಕಾನ್ ಸ್ಟೆಬಲ್ ಗಾಯಗೊಂಡಿದ್ದಾರೆ. ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಾಗರಗುಂದ ಪ್ರದೇಶದಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ. ಸಿಆರ್ ಪಿಎಫ್ ನ 165ನೇ ಬೆಟಾಲಿಯನ್ ನ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಬೇದ್ರೆ ಶಿಬಿರದಿಂದ ಉರ್ಸಂಕಲ್ ಗ್ರಾಮಕ್ಕೆ ತೆರಳಿತ್ತು. ಈ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದ ವೇಳೆ ಸಿಆರ್ ಪಿಎಫ್ ತಂಡ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಗುಂಡಿನ ದಾಳಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಸುಧಾಕರ್ ರೆಡ್ಡಿ ಹುತಾತ್ಮರಾಗಿದ್ದು, ಕಾನ್ ಸ್ಟೇಬಲ್ ರಾಮು ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಗಾಗಿ ರಾಮು ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ನಾಲ್ವರು ಆರೋಪಿಗಳನ್ನು ಸಮೀಪದ ಪ್ರದೇಶದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಆರ್ ಪಿಎಫ್ ನ ಕೋಬ್ರಾ ಘಟಕ ಮತ್ತು ಸ್ಥಳೀಯ ಪೊಲೀಸರು ಈ ಪ್ರದೇಶದಲ್ಲಿ ಜಂಟಿ ಶೋಧ ನಡೆಸುತ್ತಿದ್ದಾರೆ.


