ಮನೆ ಮಾರಾಟ ಮಾಡುವ ವಿಚಾರಕ್ಕೆ ಜಗಳವಾಡಿ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪುತ್ರನಿಗೆ ಬೆಂಗಳೂರಿನ ಸಿಸಿಹೆಚ್ 65 ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಶರತ್ ಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. 2018 ರ ಜೂನ್ 13 ರಂದು ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಮನೆ ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಕಾತ್ಯಾಯಿನಿ ಜೊತೆ ಪುತ್ರ ಶರತ್ ಕುಮಾರ್ ಜಗಳವಾಡಿದ್ದ. ಈ ವೇಳೆ ಶರತ್, ತಾಯಿಯ ಮೂಗು ಮತ್ತು ಬಾಯಿಯನ್ನು ಬಲವಾಗಿ ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದ. ಬಳಿಕ ಸಾಕ್ಷ್ಯಾಧಾರಗಳ ನಾಶಕ್ಕೂ ಯತ್ನಿಸಿದ್ದ ಎನ್ನಲಾಗಿದೆ. ಇದೀಗ 5 ವರ್ಷಗಳ ನಂತರ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಎಂ.ಎಸ್. ಕಲ್ಪನಾ ಅವರು ತೀರ್ಪು ನೀಡಿದ್ದಾರೆ.
ಆರೋಪಿ ಶರತ್ ಕುಮಾರ್ ಗೆ IPC ಕಲಂ 302 ಕ್ಕೆ ಜೀವಾವಧಿ ಶಿಕ್ಷೆ, ಹಾಗೂ ಕಲಂ 201 ಸಾಕ್ಷಿ ನಾಶಪಡಿಸಿದಕ್ಕೆ 3 ವರ್ಷ ಶಿಕ್ಷೆ ವಿಧಿಸಲಾಗಿದೆ. ಸರ್ಕಾರದ ಪರ ಅಭಿಯೋಜಕ ಎಂ.ವಿ. ತ್ಯಾಗರಾಜ ಅವರು ವಾದಿಸಿದ್ದರು.


